ಚಾಮರಾಜನಗರ: ಶಿಕ್ಷಣ, ಅನ್ನದಾಸೋಹ, ಆರೋಗ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಮಾಡಿರುವ ಮೈಸೂರಿನ ಸುತ್ತೂರು ಮಠದ ಪೀಠಾಧ್ಯಕ್ಷರಾದ ಡಾ.ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಗೆ ಮರಣೋತ್ತರ ವಾಗಿ ಭಾರತರತ್ನ ನೀಡುವಂತೆ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕಳೆದ ನೂರಾರು ವರ್ಷಗಳಿಂದ ಸುತ್ತೂರು ಮಹಾಸಂಸ್ಥಾನ ಬಹಳಷ್ಟು ಸಮಾಜ ಮುಖಿ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಈ ಸಂಸ್ಥೆಯ ಪರಮಪೂಜ್ಯ ಲಿಂಗೈಕ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರಮಹಾಸ್ವಾಮಿಗಳವರು ಪೀಠಾಧಿಪತಿಗಳಾಗಿದ್ದ 1950-60ರ ದಶಕದಲ್ಲಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದ ಸಂದರ್ಭ, ಆಹಾರ ಕೊರತೆಯ ಸಂದರ್ಭದಲ್ಲೇ ಇಡೀ ನಾಡಿನಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ತೆಗೆಯುವ ಮೂಲಕ ಇಲ್ಲಿಯವರೆಗೆ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ವಿದ್ಯಾಧಾನ ಮಾಡಿರುತ್ತಾರೆ. ಇವರ ಶಿಕ್ಷಣ ಸೇವೆಯಿಂದ ಲಕ್ಷಾಂತರ ಜನ ಇಂದು ಉದ್ಯೋಗ ಪಡೆದು ದೇಶ, ವಿದೇಶಗಳಲ್ಲಿ ಹೆಸರನ್ನು ಮಾಡಿದ್ದಾರೆ ಮತ್ತು ಹಸಿದವರಿಗೆ ಅನ್ನದಾಸೋಹವನ್ನು ಮಾಡುವ ಮೂಲಕ ಬಹು ಜನರಿಗೆ ಪ್ರತಿನಿತ್ಯ ದಾಸೋಹವನ್ನು ಸಹ ಮಾಡಿರುತ್ತಾರೆ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಸಹ ಬಹಳಷ್ಟು ಆಸ್ಪತ್ರೆಗಳನ್ನು ಕಟ್ಟಿ-ಜನರಿಗೆ ಆರೋಗ್ಯ ಸೇವೆ ಸಿಗುವಂತೆ ಮಾಡಿರುತ್ತಾರೆ. ಒಟ್ಟಿನಲ್ಲಿ ಒಂದು ಸರ್ಕಾರ ಮಾಡಬಹುದಾದ ಕೆಲಸ ಕಾರ್ಯಗ ಯಾವುದೇ ಪ್ರಚಾರವಿಲ್ಲದೆ ಎಲೆಮರೆ ಕಾಯಿಯಂತೆ ರಾಜ್ಯ ಮತ್ತು ದೇಶದಾದ್ಯಂತ ಮಾಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲೇ ಕ್ರಾಂತಿಯನ್ನು ಮಾಡಿರುತ್ತಾರೆ. ಶಿಕ್ಷಣ ಕ್ಷೇತ್ರ, ಅನ್ನದಾಸೋಹ, ಸಮಾಜ ಸೇವೆ, ಇನ್ನೂ ಅನೇಕ ಸೇವೆಗಳನ್ನು ಸಲ್ಲಿಸಿ ಲಿಂಗೈಕ್ಯರಾಗಿರುವ ಪರಮಪೂಜ್ಯ ಲಿಂಗೈಕ್ಯ ಜಗದ್ಗುರು ಶ್ರೀ ಶಿವ ರಾಜೇಂದ್ರಮಹಾಸ್ವಾಮಿಗಳವರಿಗೆ ಈ ಸಾರಿಯ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಸಮಸ್ತ ಜನತೆ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಲ್ಲಿಸಿರುವ ಮನವಿಯಲ್ಲಿ ಶ್ರೀನಿವಾಸಗೌಡ ಕೋರಿದ್ದಾರೆ.
ಈ ಸಂದರ್ಭದಲ್ಲಿ ಹೊಮ್ಮಲೋಕೇಶ್, ಅಮಚವಾಡಿ ಎಸ್.ರಾಜು, ಸಿದ್ದರಾಜು, ಗಾಯಕ ಮುತ್ತುರಾಜು, ರಾಚಪ್ಪ ಇತರರು ಹಾಜರಿದ್ದರು.
