“ಶತಾಯುಷಿ” ಯಾಗಿರುವ ಶ್ರೀಮತಿ “ಅನಂತ ಲಕ್ಷ್ಮೀ” ರವರ ಸಾರ್ಥಕ ಬದುಕು ಇತರರಿಗೂ ಮಾದರಿ

ಒಟ್ಟು ಕುಟುಂಬಗಳೇ ಇಂದು ಕಾಣೆಯಾಗಿವೆ. ಮನೆಯಲ್ಲಿ ಹಿರಿಯರಾಗಿದ್ದ ಅಜ್ಜ- ಅಜ್ಜಿ ಇದ್ದರೆ ಮನೆ ಒಂದು ರೀತಿಯಲ್ಲಿ ನಂದನವನದಂತೆ ಇರುತ್ತದೆ. ಆದರೆ ಇವತ್ತಿನ ದಿನಗಳಲ್ಲಿ ಗಂಡ- ಹೆಂಡತಿ- ಮಕ್ಕಳೇ ಒಟ್ಟು ಕುಟುಂಬ ಎನ್ನುವಂತಾಗಿದೆ!. ಮನೆಯಲ್ಲಿ ಅಜ್ಜ- ಅಜ್ಜಿಯರು ಇದ್ದರೆ ವಾತಾವರಣವೇ ಸುಂದರವಾಗಿರುತ್ತದೆ. ಮಕ್ಕಳಿಗೆ ಕಥೆಗಳನ್ನ, ಉತ್ತಮ ಸಂಸ್ಕಾರವನ್ನು ಕಲಿಸುತ್ತಾರೆ.  ಜೊತೆಗೆ ಅವರನ್ನು ಸಾಕಿ ಬೆಳೆಸುತ್ತಾರೆ. ಆದರೆ ಇವತ್ತಿನ ದಿನಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಕೆಲಸಕ್ಕೆ ಸೇರಿಕೊಂಡಿರುತ್ತಾರೆ. ಅವರಿಗೆ ಮಕ್ಕಳ ಜೊತೆಯಲ್ಲಿ ಕಾಲ ಕಳೆಯುವುದು ಕೂಡ ಕಷ್ಟವಾಗಿದೆ. "ಹಳೆಬೇರು ಹೊಸ ಚಿಗುರು ಮೂಡಿರಲು ಮರ ಸೊಬಗು" - ಎಂಬ ಮಂಕುತಿಮ್ಮನ ಕಗ್ಗ ದ ಸಾಲುಗಳು ಈ ಕ್ಷಣದಲ್ಲಿ ನೆನಪಾಗುತ್ತವೆ.

ಮಕ್ಕಳು ಹಿರಿಯರ ಜೊತೆ ಹೆಚ್ಚಾಗಿ ಬೆರೆತರೆ ಅವರು ತಮ್ಮ ಜೀವನದಲ್ಲಿ ಸಂಸ್ಕಾರ ಗುಣಗಳನ್ನು ಪಡೆದು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ. ಕಗ್ಗದಲ್ಲಿ ಇಡೀ ಜೀವನದ ಸಾರ ಅಡಗಿರುವಂತೆ ಪ್ರಸ್ತುತ ಮೈಸೂರಿನ ಶ್ರೀರಾಂಪುರದ ಬೆಮೆಲ್ ನಗರದಲ್ಲಿ ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ವಾಸವಾಗಿರುವ ಶ್ರೀಮತಿ ಅನಂತಲಕ್ಷ್ಮೀ ಯವರ ಜೀವನವೂ ಕೂಡಾ ಅನುಭವಗಳ ಪಕ್ವತೆಯಿಂದ ಕೂಡಿದುದಾಗಿದೆ.

ಈ ಬಗ್ಗೆ ಅವರ ಸೊಸೆ ಮತ್ತು ಅಜ್ಜಿಯು ಆದ ಅನಂತ ಲಕ್ಷ್ಮೀರವರ ಬಗ್ಗೆ (ಹತ್ತಿರದ ಸಂಬಂಧಿ) ಕಲಾಪ್ರಸಾದ್ ರವರು ತಾವು ಕಳೆದ ದಿನಗಳನ್ನು ಕೂಡ ನೆನಪಿಸಿಕೊಳ್ಳುವುದರ ಜೊತೆಗೆ ಅವರಿಂದಲೂ ಕೂಡ ಉತ್ತಮ ಸಂಸ್ಕಾರವನ್ನ ಪಡೆದು ತಮ್ಮ ಮಕ್ಕಳು ಮೊಮ್ಮಕ್ಕಳಿಗೂ ಕೂಡ ಅದನ್ನು ಹಂಚುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕೊಡು-ಕೊಳ್ಳುವಿಕೆ ಮನೆಯಲ್ಲಿ ಹಿರಿಯರಿದ್ದಾಗ ಮಾತ್ರ ಅದು ಸಾಧ್ಯ ಎನ್ನುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ.

ತಮ್ಮ ಅತ್ತೆ ಅನಂತ ಲಕ್ಷ್ಮಿ ರವರ ಬಗ್ಗೆ ಹೆಮ್ಮೆಯ ಭಾವವನ್ನ ಹೊಂದಿದ್ದಾರೆ. ನಾನೂ ಎಂದೂ ಕೂಡ ಅವರ ಜೊತೆಗೆ ಒರಟಾಗಿ ನಡೆದುಕೊಂಡಿಲ್ಲ. ಅನಂತ ಲಕ್ಷ್ಮಿ ರವರು ಕೂಡ ನನ್ನನ್ನು ಕಂಡರೆ ಪ್ರೀತಿ ಪೂರ್ವಕ ಭಾವನೆಯನ್ನು ಹೊಂದಿದ್ದರು ಎನ್ನುವ ಕಲಾಪ್ರಸಾದ್ ರವರು ಅವರ ದಿನನಿತ್ಯ ಅವರ ಯೋಗ ಕ್ಷೇಮದ ಬಗ್ಗೆ ಸದಾ ಜಾಗೃತ ವಹಿಸಿ ಈ ಒಂದು ಶತಾಯುಷಿಯಾಗಲು ಅವರು ಕೂಡ ಕಾರಣಿ ಕರ್ತರಾಗಿದ್ದಾರೆ. ಜೊತೆಗೆ ಅವರ ಮನೆಯವರು ವಿಶ್ವಪ್ರಸಾದ್ ರವರು, ಹಾಗೂ ಮಕ್ಕಳಾದ ವಿದ್ಯಾ , ವಿಭಾ ಸೇರಿದ್ದಾರೆ. ಅಜ್ಜಿ ನೀಡಿದ ಸಂಸ್ಕಾರಯುತ ಗುಣ ಮೊಮ್ಮಕ್ಕಳಲ್ಲೂ ಕೂಡ ಮುಂದುವರಿದಿದೆ. ಅದರಿಂದಾಗಿ ಇವರು ಉತ್ತಮ ಸಂಸ್ಕಾರದೊಂದಿಗೆ ವ್ಯಾಸಂಗವನ್ನು ಮಾಡಿ, ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ.

ತಮ್ಮ ಅತ್ತೆಯವರ ಬಗ್ಗೆ ಕಲಾಪ್ರಸಾದ್ ರವರು ತಮ್ಮ ಅನುಭವದ ಜೊತೆಗೆ, ನೆನಪಿನ ಬುತ್ತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ......

ಶ್ರೀಮತಿ ಅನಂತಲಕ್ಷ್ಮೀ ಯವರು ದಿನಾಂಕ 21, ಸೆಪ್ಟೆಂಬರ್ 1926 ಸೋಮವಾರದಂದು ನಂಜನಗೂಡು ಬಳಿಯ ಹೆಡತಲೆ ಯಲ್ಲಿ ಬ್ರಾಹ್ಮಣ ಐಯ್ಯರ್ ಕುಟುಂಬದಲ್ಲಿ ಜನಿಸಿದರು. ತಂದೆ ಶ್ರೀ ತಂಬಯ್ಯ ಮತ್ತು ತಾಯಿ ಶ್ರೀಮತಿ ಸುಬ್ಬಮ್ಮನವರು.... ಅವರ ಆರು ಜನ ಮಕ್ಕಳಲ್ಲಿ ಹಿರಿಯವರಾಗಿ ಅನಂತ ಚತುರ್ದಶಿ ಹಬ್ಬದ ದಿನದಂದು ಜನಿಸಿದರು.

ಅನಂತಚತುರ್ದಶಿ ಹಬ್ಬದ ದಿನದಂದೇ ಜನಿಸಿದ್ದರಿಂದ "ಅನಂತಲಕ್ಷ್ಮಿ" ಎಂದು ಮನೆಯವರು ನಾಮಕರಣ ಮಾಡಿದರು. ತವರು ಮನೆಯವರು ಅವರನ್ನು "ಪುಟ್ಟು" ಎಂದು ಕರೆದರೆ, ಕೆಲವರು ಪ್ರೀತಿಯಿಂದ "ರಾಜು "ಎಂದು ಕರೆಯುತ್ತಿದ್ದರು. ಕುಟುಂಬದ ಹಿರಿಯರಾಗಿ ಎಲ್ಲರಿಗೂ ಉತ್ತಮ ಮಾರ್ಗ ದರ್ಶನ ಮಾಡುತ್ತ ಬಂದವರು ಇವರು. ಅವರಿಗೆ ಈಗ ನೂರು ವರ್ಷಗಳು ಸಂದಿದೆ ಎಂದರೆ ತುಂಬಾ ಸಂತೋಷದ ವಿಚಾರ ಎನ್ನುತ್ತಾರೆ.

ಶತಾಯುಷಿಯಾಗಲು ಕೂಡ ಪುಣ್ಯ ಮಾಡಿರಬೇಕು ಪೂರ್ವ ಜನ್ಮದ ಪುಣ್ಯ, ಅವರ ತಂದೆ ತಾಯಿಗಳ ಆಶೀರ್ವಾದ, ಜೊತೆಗೆ ಸಂಸ್ಕಾರಯುತ ಗುಣ ಇವೆಲ್ಲವೂ ಸೇರಿ ಈ ರೀತಿಯ ಒಂದು ಸಂಭ್ರಮದ ವಾತಾವರಣ ಉಂಟಾಗಿದೆ. ಶತ ಸಂವತ್ಸರವನ್ನು ಕಂಡ ಮಹಾನ್ ಚೇತನ ಸದಾಕಾಲವೂ ಚಟುವಟಿಕೆ ಯಿಂದ ಇರುತ್ತಿದ್ದರು. ಇವರು ತಮ್ಮ ಹದಿನಾಲ್ಕನೆ ವಯಸ್ಸಿಗೆ ಮದುವೆಯಾಗಿ ಕೃ.ರಾ.ಸಾಗರದ (ಕೆ ಆರ್ ಎಸ್) ಕೆ. ರಾಮಯ್ಯನವರ ದ್ವಿತೀಯ ಪತ್ನಿಯಾಗಿ ಮನೆ ತುಂಬಿದರು. ಮೊದಲನೆ ಪತ್ನಿಯ ನಿಧನದ ನಂತರ ರಾಮಯ್ಯ ನವರು ಅನಂತಲಕ್ಷ್ಮಿಯವರ ಕೈ ಹಿಡಿದರು. ಮೊದಲ ಪತ್ನಿಯ ಇಬ್ಬರು ಮಕ್ಕಳಿಗೆ ತುಂಬು ಪ್ರೀತಿಯನ್ನು ಧಾರೆ ಎರೆದು ಬೆಳಸಿದ ಇವರಿಗೆ, ನಂತರ ಮೂರು ಜನ ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು ಜನಿಸಿದರು. ಕೂಡು ಕುಟುಂಬವಿದ್ದ ಕಾಲವದು. ತಮ್ಮ ಮಕ್ಕಳ ಜೊತೆ ಜೊತೆಗೆ ತಮ್ಮ ಮಾವನವರ ತಮ್ಮನ ಮಕ್ಕಳನ್ನೂ ಸಹಾ ಬೆಳೆಸಿದ ಮಾತೃ ವಾತ್ಸಲ್ಯ ದ ಸಾಕಾರ ಮೂರ್ತಿ ಇವರು ಎನ್ನುತ್ತಾರೆ.

ಬರುವ ಅತ್ಯಲ್ಪ ಸಂಬಳದಲ್ಲೇ ಜಾಣತನದಿಂದ ಸಂಸಾರದ ನೊಗವನ್ನು ಎಳೆದು ಎಲ್ಲರನ್ನೂ ಹೊಟ್ಟಬಟ್ಟೆ ಕಟ್ಟಿ ಬೆಳಸಿದವರು. ಅನಂತಲಕ್ಷ್ಮಿಯವರು ಏಳನೇ ತರಗತಿ ಓದಿದ್ದರೂ ಅಪಾರವಾದ ಲೋಕಜ್ಞಾನವನ್ನು ಹೊಂದಿದ್ದಾರೆ. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣವನ್ನು ನೀಡಿದ್ದಲ್ಲದೇ ಹೆಣ್ಣುಮಕ್ಕಳು ಸಹಾ ಆ ಕಾಲದಲ್ಲೇ ತಮ್ಮ ಕಾಲಮೇಲೆ ತಾವು ನಿಲ್ಲಲು ಪ್ರೇರಕ ಶಕ್ತಿಯಾದವರು. ಒಂದು ಮಧ್ಯಮ ವರ್ಗದ ಸುಖಿ ಕುಟುಂಬ ಇವರದ್ದಾಗಿದೆ. ತಾವು ಬೆಳೆದು ಇತರರನ್ನು ಬೆಳೆಸುವ ಗುಣವನ್ನು ಇವರಲ್ಲಿ ಕಾಣಬಹುದಾಗಿದೆ. ಜನಾನುರಾಗಿಯಾಗಿರುವ ಅನಂತಲಕ್ಷ್ಮಿ ಯವರು ಮನೆಗೆ ಬಂದ ಯಾರನ್ನೇ ಆಗಲಿ ಅತಿಥಿ ಸತ್ಕಾರವಿಲ್ಲದೇ ಕಳಿಸುತ್ತಿರಲಿಲ್ಲ. "ಅತಿಥಿ ದೇವೋ ಭವಃ" ಎಂಬಂತೆ ಯಾರೇ ಮನೆಗೆ ಬಂದರೂ. ತಿಂಡಿ ಊಟಗಳಿಲ್ಲದೆ ಯಾರನ್ನೂ ವಾಪಸ್ ಕಳಿಸಿದ ನೆನೆಪೇ ಇಲ್ಲ ಎನ್ನುವ ಕಲಾಪ್ರಸಾದ್ ರವರು ಒಂದು ರೀತಿಯಲ್ಲಿ ಅವರನ್ನು

“ಅನ್ನಪೂರ್ಣೇಶ್ವರಿ” ಎಂದೇ ಕರೆಯುತ್ತಾರೆ. ಇವರ ಅನಿಸಿಕೆಯನ್ನು ನಾನು ಕೂಡಾ ಒಪ್ಪುತ್ತೇನೆ!. ಏಕೆಂದರೆ ಕಲಾಪ್ರಸಾದ್ ಮೇಡಂ ರವರು ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುಗರ ಬಳಗದ ಸದಸ್ಸೆ ಜೊತೆಗೆ ಇವರು ಸದಾ ಕ್ರಿಯಾಶೀಲರಾಗಿ ಸದಭಿರುಚಿ ಹವ್ಯಾಸಗಳನ್ನ ಒಳಗೊಂಡಿರುತ್ತಾರೆ.

ಆಕಾಶವಾಣಿಯ ಕಾರ್ಯಕ್ರಮಗಳಲ್ಲೂ ಕೂಡ ಭಾಗಿಯಾಗಿದ್ದಾರೆ. ಜೊತೆಗೆ ಪತ್ರಿಕೆಗಳಲ್ಲಿ ಲೇಖನಗಳನ್ನು, ಕಥೆಗಳನ್ನು ಕೂಡ ಬರೆದಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ, ಪ್ರಾರ್ಥನೆ ಎಲ್ಲವನ್ನೂ ವಹಿಸಿದ್ದಾರೆ. ಇದರಿಂದಾಗಿ ಅಲ್ಲಿ ಪರಿಚಯ ವಾದ ನಂತರ ನಾನು ಹಾಗೂ ನನ್ನ ಹಿರಿಯ ಆತ್ಮೀಯ ಸ್ನೇಹಿತರಾದ ಕಣ್ಣೂರು ವಿ ಗೋವಿಂದಾಚಾರಿ ರವರು ಅವರ ಮನೆಗೆ ನಾವು ಹೋದಾಗಲೆಲ್ಲ ಅವರ ಅತ್ತೆ ಅನಂತಲಕ್ಷ್ಮಿ ರವರು ನಮ್ಮನ್ನ ಬಹಳ ಉಪಚಾರ ಮಾಡಿದ್ದಾರೆ. ತಿನ್ನಲು, ಕುಡಿಯಲು ಏನಾದರೂ ಕೊಡುತ್ತಿದ್ದರು. ಜೊತೆಗೆ ಆಗ ಅವರ ವಯಸ್ಸು 85 ರ ಆಸು ಪಾಸು ಇತ್ತು. ನಾವು ಅವರ ಮನೆಗೆ ಹೋದ ತಕ್ಷಣ ಚೆನ್ನಾಗಿ ಗುರುತಿಸುತ್ತಿದ್ದರು. ಜೊತೆಗೆ ಸುಮಾರು ದಿನಗಳು ಆದವು ನೀವು ಬಂದು ಎಂದು ಉಪಯೋಗಿಸಲು ಪರಿಚಯಿಸುತ್ತಿದ್ದರು. ಸತ್ಕಾರ ಮಾಡುವ ವಿಷಯದಲ್ಲಿ ಇವರು ಎತ್ತಿದ ಕೈ. ಅವರು ಇದನ್ನು ತಮ್ಮ ತಂದೆ ತಾಯಿಯಿಂದ ಪಡೆದು ನಂತರದಲ್ಲಿ ಅವರ ಮನೆಗೆ ಯಾರೇ ಬಂದರೂ ಕೂಡ ಮೊದಲು ಅವರಿಗೆ ಆತಿಥ್ಯ ಮಾಡುವುದೇ ಒಂದು ದೊಡ್ಡ ಸೇವೆ ಎಂದು ಭಾವಿಸಿದ್ದರು. ಆ ಒಂದು ಸತ್ಕಾರವನ್ನ ನಾವು ಹಲವು ವರ್ಷಗಳಿಂದಲೂ ಪಡೆದಿದ್ದೇವೆ. ಆದರೆ ಈಗ ಅವರಿಗೆ ವಯಸ್ಸಾದಂತೆ ನೆನಪಿನ ಶಕ್ತಿ ಕಡಿಮೆಯಾಗಿ ಅವರ ಮನೆಗೆ ಈಗ ಹೋದಾಗ ಗುರುತಿಸುತ್ತಿಲ್ಲ. ಆದರೂ ಕೂಡ ನಮ್ಮಗಳನ್ನ ನೋಡಿದ ತಕ್ಷಣ ಅವರಿಗೆ ಏನಾದರೂ ತಿನ್ನಲು ಕೊಡು ಕಲಾ ಎನ್ನುತ್ತಾರೆ!. ಜೊತೆಗೆ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಾರೆ. ಸದಾ ಧ್ಯಾನ, ಹಿತ ಮಿತವಾದ ಆಹಾರ ಎಲ್ಲವನ್ನು ಈ ದಿನವೂ ಕೂಡ ಚಾಚು ತಪ್ಪದೇ ಮಾಡುತ್ತಾ ಬರುತ್ತಿದ್ದಾರೆ. ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರು ಕೂಡ ಈ ಕ್ಷಣದಲ್ಲಿ ನನಗೆ ನೆನಪಾಗುತ್ತಾರೆ.

ಅನಂತಲಕ್ಷ್ಮಿ ರವರು ಅದರಲ್ಲೂ ದೇವರ ಮುಂದೆ ಕುಳಿತರೆ ಅವರ ಮೌನ, ಧ್ಯಾನ, ಜೊತೆಗೆ ಭಕ್ತಿ- ಭಾವವನ್ನು ಮೆರೆಯುತ್ತಾರೆ. ಕಟ್ಟುನಿಟ್ಟಾಗಿ ದಿನನಿತ್ಯ ಸ್ನಾನ, ಪೂಜೆ, ಜೊತೆಗೆ ಸಮಯವಿದ್ದಾಗ ಪುಸ್ತಕಗಳನ್ನು ಕೂಡ ಓದುತ್ತಾರೆ. ಟಿವಿ ವೀಕ್ಷಣೆ ಇತ್ಯಾದಿ ಕೆಲಸಗಳನ್ನು ನಡು ನಡುವೆ ಮಾಡುತ್ತಾರೆ. ಒಂದು ರೀತಿಯಲ್ಲಿ ಇವರು ಅರ್ಥಪೂರ್ಣ ದಿನಚರಿ ಯೊಂದಿಗೆ ತಮ್ಮ ಜೀವನವನ್ನು ಸಾಗಿಸಿದ್ದರಿಂದಲೇ ಸಾರ್ಥಕ ಶತಮಾನೋತ್ಸವವನ್ನ ಆಚರಿಸಿದ್ದಾರೆ ಎನ್ನುತ್ತಾರೆ ಕಲಾಪ್ರಸಾದ್ ರವರು.

ನಾವು ಅವರಲ್ಲಿ ಕಂಡ ಗುಣ ಎಂದರೆ ತಾಳ್ಮೆ, ಜೊತೆಗೆ ಕೋಪ ಮಾಡಿಕೊಳ್ಳದೆ ಇರುವುದು. ಈ ದಿನಗಳಲ್ಲಿ ಇವೆಲ್ಲವನ್ನ ಹುಡುಕುವಂತೆ ಆಗಿದೆ. ಎಷ್ಟೊಂದು ಮುಗ್ಧರಾಗಿ ಮಕ್ಕಳಂತೆ ಯಾವುದನ್ನು ಕೂಡ ಚಿಂತಿಸದೆ ಸೊಸೆಯನ್ನು ಕೂಡ ಮಗನನ್ನು ಕೂಡ ಅಷ್ಟೇ ಚಂದವಾಗಿ ನೋಡಿಕೊಂಡವರು. “ತಾವಾಯಿತು ತಾವು ಮೇಯುವ ಸೊಪ್ಪಾಯಿತು”- ಎನ್ನುವಂತೆ ಅನ್ಯ ವಿಷಯದ ಬಗ್ಗೆ ಚರ್ಚಿಸದೆ, ಯಾರೊಂದಿಗೂ ತಮ್ಮನ್ನ ಹೋಲಿಸಿಕೊಳ್ಳದೆ, ನಿರೀಕ್ಷೆ ಪಡೆಯದೆ, ಪ್ರಸ್ತುತ ದಿನಗಳನ್ನು ಸಂತೋಷದಿಂದ ಕಾಲ ಕಳೆಯುವುದು ಇವರ ದಿನಚರಿಯಲ್ಲಿ ಸೇರಿದೆ.

ಜೀವನದ ಏಳು ಬೀಳುಗಳನ್ನು ಸಹಜವೆಂಬಂತೆ ಸ್ವೀಕರಿಸಿ. ತುಂಬಾ ಜಾಣ್ಮೆಯಿಂದ ಬದುಕು ಸಾಗಿಸಿದವರು ಅನಂತಲಕ್ಷ್ಮಿಯವರು ಎಂದು ಗೊತ್ತಾಗಲು ಅವರ ಮನೆಯಲ್ಲಿ ನಾವು ಒಂದು ಗಂಟೆ ಕಳೆದಾಗಲೇ ನಮ್ಮ ಅನುಭವಕ್ಕೆ ಬಂದಿತು. ಈಗ ವಯಸ್ಸಾದಂತೆ ಅವರಿಗೆ ನಿದ್ದೆ ಸರಿಯಾಗಿ ಬರುತ್ತಿಲ್ಲ. ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಆದರೂ ಅವರ ನಿರಂತರ ಪ್ರಯತ್ನಕ್ಕೆ ಭಲೇ ಎನ್ನಲೇಬೇಕು.

ಕಲಾಪ್ರಸಾದ್ ರವರು ತಮ್ಮ ನೆನಪಿನ ಬುತ್ತಿಯನ್ನು ಮತ್ತೆ ಮುಂದುವರಿಸುತ್ತಾರೆ……
ತಮ್ಮ ಮಕ್ಕಳಿಗೆ ಹಣದ ಮೌಲ್ಯವನ್ನು ಚೆನ್ನಾಗಿ ಕಲಿಸಿದ್ದಾರೆ. ಯಾವುದೇ ಆಡಂಬರವಿಲ್ಲದೆ ಸಹಜ ಜೀವನ ನಡೆಸುವುದನ್ನು ಅವರ ಮಕ್ಕಳು ಅವರಿಂದಲೇ ಕಲಿತಿದ್ದಾರೆ. ಉನ್ನತ ಜೀವನಾನುಭವದ ಪಾಠ, ಸಂಸ್ಕಾರ, ಸರಳತೆಯು ಅವರನ್ನು ಸಜ್ಜನ ವ್ಯಕ್ತಿಯಾಗಿ ರೂಪಿಸಿದೆ ಎನ್ನುತ್ತಾರೆ.

ಓದಿದ್ದು ಅರನೇ ತರಗತಿಯಾದರೂ ವ್ಯವಹಾರ ಜ್ಞಾನ ದಲ್ಲಿ ಚಾಣಾಕ್ಷತನವಿದೆ. ಎಲ್ಲಾ ವಿಷಯಗಳಲ್ಲೂ ಅಪಾರ ಲೋಕಜ್ಞಾನವಿದೆ. ಮನೆಯ ಕೆಲಸಗಳ ಜೊತೆಗೆ ತಂದೆಯಿಂದಲೇ ಸಂಗೀತ ಕಲಿಕೆ, ಸಂಗೀತದಲ್ಲಿ ಒಲವು..ಅಲ್ಲದೆ..ಟೈಲರಿಂಗ್,, ನಿಟ್ಟಿಂಗ್ ಹೀಗೆ ಹಲವಾರು ಆಸಕ್ತಿಯ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ರು..ಬಿಡುವಿನ ಸಮಯದಲ್ಲಿ ಹೂಬತ್ತಿ ಹೊಸೆಯುವುದು..ಗೆಜ್ಜೆವಸ್ತ್ರ ಮಾಡುವುದು….ಸಂಪ್ರದಾಯದ ಹಾಡುಗಳನ್ನು ಹಾಡುವುದು..ದೇವರನಾಮ ಹಾಡುವುದು..ಹೀಗೆ ಹಲವಾರು ದೈನಂದಿನ ಚಟುವಟಿಕೆಗಳ ಮೂಲಕ ಜೀವನವನ್ನು ಹಸನಾಗಿಸಿಕೊಂಡು ಬೆಳೆದವರು ಎಂದು ಹೇಳುವಾಗ ಅನಂತ ಲಕ್ಷ್ಮಿ ರವರ ಬಗ್ಗೆ ಧನ್ಯತಾಭಾವ ನಮ್ಮಲ್ಲಿ ಮೂಡುತ್ತದೆ.

ಹಬ್ಬ- ಹರಿದಿನಗಳಲ್ಲಂತೂ ಯಾವ ಯಾವ ದೇವರಿಗೆ ಯಾವ ರೀತಿಯಲ್ಲಿ ಭಕ್ಷ್ಯಗಳನ್ನು ತಯಾರಿಸಬೇಕು..ಹಾಗೂ ಪೂಜಾ ವಿಧಿ ವಿಧಾನಗಳನ್ನು ಚೆನ್ನಾಗಿ ಅರಿತಿದ್ದರು..ವಿಶೇಷವಾಗಿ ಅಯಾ ಹಬ್ಬಗಳಿಗೆ ಸಂಬಂಧಿಸಿದ ರಂಗೋಲಿಗಳನ್ನೇ ಹಾಕುತ್ತಿದ್ದರು…ಜೀವನೋತ್ಸಾಹ ಅಂದ್ರೆ ಏನೂ ಎಂಬುದನ್ನು ಇವರನ್ನು ನೋಡಿ ಕಲಿಯಬೇಕು ಎನ್ನುವ ಕಲಾಪ್ರಸಾದ್
ಇದೀಗ ನೂರು ಸಂವತ್ಸರ ಗಳನ್ನು ದಾಟಿ 101 ಕ್ಕೆ ಕಾಲಿಡುತ್ತಿರುವುದು ಹರ್ಷದಾಯಕವಾಗಿದೆ ಎನ್ನುತ್ತಾರೆ.

ಆದರೆ ಈ ದಿನಗಳಲ್ಲಿ ವಯೋಸಹಜವಾಗಿ ಕಿವಿ ಕೇಳಿಸುತ್ತಿಲ್ಲ. ದೃಷ್ಟಿಯೂ ಇದೀಗ ಕಡಿಮೆಯಾಗುತ್ತಿದೆ. ಅನಂತಲಕ್ಷ್ಮಿ ಯವರು ಆರೋಗ್ಯವಂತ ಶರೀರದವರಾಗಿದ್ದು ಬಿ.ಪಿ.ಯಾಗಲೀ ಮಧುಮೇಹ ಖಾಯಿಲೆಯಾಗಲೀ ಇಲ್ಲ ಎನ್ನುವಾಗ ನಮಗೆ ಆಶ್ಚರ್ಯವಾಗುತ್ತದೆ. ನಾವು ನಮ್ಮ ದಿನನಿತ್ಯ ನಮ್ಮ ಚಟುವಟಿಕೆಗಳನ್ನ ಹೇಗೆ ರೂಪಿಸಿಕೊಳ್ಳುತ್ತೇವೋ ಅದರ ಮೇಲೆ ಈ ರೀತಿ ಅವಲಂಬಿತವಾಗುತ್ತದೆ ಎನ್ನುವ ಉತ್ತರ ನನಗೆ ಇವರಿಂದ ದೊರೆಯಿತು.

ನಮ್ಮ ಇವತ್ತಿನ ಊಟ, ದಿನಚರಿ ಎಲ್ಲವೂ ಕೂಡ ಉಲ್ಟಾಪಲ್ಟವಾಗಿದೆ. ಹಣ ನಮಗೆ ಹೇರಳವಾಗಿ ಇದ್ದರೂ ಆರೋಗ್ಯವೇ ಇಲ್ಲದಂತಾಗಿದೆ!.

ಇನ್ನೊಂದು ವಿಶೇಷತೆ ಎಂದರೆ…..ನಿಮ್ಮ ಆರೋಗ್ಯದ ಗುಟ್ಟು ಏನು ಎಂದು ಕೇಳಿದರೆ ವಾರದಲ್ಲಿ ಮೂರುದಿನ ಒಂದು ಹೊತ್ತು ಊಟ ಮಾಡುವುದು. ರಾತ್ರಿ ಊಟ ವರ್ಜ್ಯ ವೆಂದು ಹೇಳುತ್ತಾರೆ. ಇದನ್ನ ಕಲಾಪ್ರಸಾದ್ ರವರೇ ಅತ್ತೆಯ ದಿನಚರಿಯನ್ನು ನೆನಪಿಸಿಕೊಳ್ಳುತ್ತಾರೆ.


ಈಗ ಅವರು ಮರೆವಿನ ಖಾಯಿಲೆ ಯಿಂದ ಬಳಲುತ್ತಿದ್ದಾರೆ (ಡಿಮೆನ್ಷಿಯಾ (dementia)… ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳನ್ನು ಕಂಡ ಹಿರಿ ತಲೆಮಾರಿನ ಕೊಂಡಿ ಇವರಾಗಿದ್ದಾರೆ… ಸದಾ ಆಧ್ಯಾತ್ಮಿಕ. ಚಿಂತನೆ ಯಲ್ಲೇ ಇರುವ ಅನಂತಲಕ್ಷ್ಮೀಯವರಿಗೆ ಇದೀಗ ಮಗುವಿನಂತೆ ಮುಗ್ದತೆ ಆವರಿಸಿದೆ..ತನ್ನನ್ನೇ ತಾನು ಮರೆಯುತ್ತಾರೆ..ತಾನೆಲ್ಲಿದ್ದೇನೆ ಎಂಬ ಅರಿವೂ ಕೂಡಾ ಆಗುತ್ತಿಲ್ಲ…ಊಟ ತಿಂಡಿಯತ್ತ ಗಮನವಿಲ್ಲ..ನೂರು ವಸಂತ ಗಳನ್ನು ಕಂಡ ಇವರಿಗೆ ಉತ್ತಮ ಆರೋಗ್ಯವನ್ನು ಭಗವಂತ ನೀಡಲಿ.. ಎಂಬುದು ಕಲಾ ಪ್ರಸಾದ್ ರವರ ಆಶಯ. ಪತಿ ವಿಶ್ವ ಪ್ರಸಾದ್ ರವರಲ್ಲೂ ಕೂಡ ಆಶಯ ವೃತ್ತಿಯಲ್ಲಿ ಬೆಮೆಲ್ ನೌಕರರಾಗಿ ಈಗ ನಿವೃತ್ತಿ ಪಡೆದಿರುವ ಇವರು ಸದಾ ತಾಯಿಯ ಸೇವೆಯಲ್ಲಿ ತಮ್ಮ ದಿನಚರಿಯನ್ನು ಕೂಡ ಕಳೆಯುತ್ತಿದ್ದಾರೆ. ಜೊತೆಗೆ ಯೋಗದಲ್ಲೂ ಕೂಡ ಉನ್ನತ ಶಿಕ್ಷಣ ಪಡೆದು ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ಸದಾ ಆಧ್ಯತ್ಮ, ಸಾಹಿತ್ಯ, ಸಂಗೀತ ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ತಾಯಿಯ ಸಂಸ್ಕಾರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದಾರೆ. ತಾಯಿಯ ಆತಿಥ್ಯದ ಪರಿಯನ್ನ ಈ ದಂಪತಿಗಳಲ್ಲೂ ಕೂಡ ನಾವು ಈ ದಿನದಲ್ಲೂ ಕೂಡ ಕಾಣಬಹುದಾಗಿದೆ.

ನೋಡಿ ಅನಂತಲಕ್ಷ್ಮಿ ರವರ ದಿನಚರಿ, ಅವರ ಪರಿಪಕ್ವತೆ, ಸಂಸ್ಕಾರಯುತ ಗುಣ, ಜೊತೆಗೆ ಕುಟುಂಬದ ಸರಳತೆ ಆಂತರ್ಯದ ಭಾವ, ಜೊತೆಗೆ ಸಮಾಜಮುಖಿ ಚಿಂತನೆ, ಆಧ್ಯಾತ್ಮ, ಎಲ್ಲವನ್ನ ಪಡೆದುಕೊಂಡಿರುವುದು ಅವರ ಪೂರ್ವಜನ್ಮದ ಪುಣ್ಯ. ಎಲ್ಲವುಗಳಿಂದ ಪ್ರಭಾವಿತರಾಗಿ ಮುಂದಿನ ದಿನಗಳಲ್ಲಿ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಕೂಡ ಅದೇ ವಿಷಯದಲ್ಲಿ ಚಿಂತನೆಯನ್ನು ತುಂಬುತ್ತಾರೆ. ಇದರಿಂದಾಗಿ ಯಾರಲ್ಲೂ ಕೂಡ ಚಿಂತೆ ಆವರಿಸಲಿಲ್ಲ. ಅವರ ಮನೆಗೆ ನೆಂಟರಿಷ್ಟರು, ಪರಿಚಯಸ್ತರು ಬಂದಾಗ ಸ್ವರ್ಗಕ್ಕೆ ಮೂರೇ ಗೇಣು!. ಅವರನ್ನ ವಿಚಾರಿಸಿ ಊಟೋಪಚಾರಮಾಡುವುದೇ ಆ ದಿನದ ವಿಶೇಷತೆ ಆಗಿರುತ್ತದೆ.

ಶತಾಯುಷಿ ಜೀವನವನ್ನು ಪಡೆದಿರುವ ಅನಂತ ಲಕ್ಷ್ಮಿ ರವರು ಮತ್ತೊಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಭಗವಂತ ಈ ಶುಭ ಸಂದರ್ಭದಲ್ಲಿ ಮತ್ತೊಂದು ನೂರು ವರ್ಷ ಆಯಸ್ಸು, ಆರೋಗ್ಯ ಎಲ್ಲವನ್ನ ನೀಡಲಿ ಎನ್ನುವುದೇ ನಮ್ಮೆಲ್ಲರ ಆಶಯ.

ಕಾಳಿಹುಂಡಿ ಶಿವಕುಮಾರ್, ಮೈಸೂರು

Leave a Reply

Your email address will not be published. Required fields are marked *