ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ: ಡಾ. ಪ್ರತಿಮಾ ಡಿ.ಎಸ್.

ಚಾಮರಾಜನಗರ: ಪದವಿ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ರೇಂಜರ್ಸ್, ರೆಡ್‌ಕ್ರಾಸ್ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಡಾ. ಪ್ರತಿಮಾ ಡಿ.ಎಸ್. ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೇಂಜರ್ಸ್, ರೆಡ್‌ಕ್ರಾಸ್, ಅಭಿವ್ಯಕ್ತಿ ಹಾಗೂ ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗಿ, ಪರೀಕ್ಷೆ ಬರೆದು ಪದವಿ ಪಡೆಯುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ಅದರೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿರುವ ಕಲಾ ಪ್ರತಿಭೆಯನ್ನು ಹೊರತರುವುದರ ಜೊತೆಗೆ ವೇದಿಕೆಯಲ್ಲಿ ಮಾತನಾಡುವ ಧೈರ್ಯವನ್ನು ಬೆಳೆಸುತ್ತವೆ ಎಂದರು.

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ. ಜೀವನದಲ್ಲಿ ಹಲವು ಸವಾಲುಗಳು ಎದುರಾಗಲಿದ್ದು, ಅವುಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆ ಜನಪದ ಕಲೆಗಳಿಗೆ ಹೆಸರುವಾಸಿಯಾಗಿದ್ದು, ಮಲೆ ಮಹದೇಶ್ವರನ ಹಾಡು ಸೇರಿದಂತೆ ಇಲ್ಲಿನ ಜಾನಪದ ಪರಂಪರೆ ವಿಶಿಷ್ಟವಾಗಿದೆ. ಇಂತಹ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯ ಕಲಾವಿದರಿಂದ ಕಲಿಯುವ ಹಾಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವಿರುವುದು ಹೆಮ್ಮೆಯ ವಿಚಾರ ಎಂದರು.

ಎನ್‌ಎಸ್‌ಎಸ್ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಗ್ರಾಮೀಣ ಬದುಕಿನ ಅನುಭವ ದೊರೆಯುತ್ತದೆ. ರೆಡ್‌ಕ್ರಾಸ್ ಚಟುವಟಿಕೆಗಳು ಸೇವಾ ಮನೋಭಾವ ಬೆಳೆಸಿದರೆ, ರೇಂಜರ್ಸ್ ಮತ್ತು ರೋವರ್ಸ್ ಚಟುವಟಿಕೆಗಳು ಶಿಸ್ತು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಯುವ ಸಂಭ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿದ್ಯಾರ್ಥಿಗಳು ಹೊಸತನದ ಬಗ್ಗೆ ಚಿಂತಿಸಬೇಕು. ಭವಿಷ್ಯದಲ್ಲಿ ಉದ್ಯಮಿಗಳಾಗುವ, ಅಧಿಕಾರಿಗಳಾಗುವ ಗುರಿಯನ್ನು ಹೊಂದಿ ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಾಮರಾಜನಗರ ಹಿಂದುಳಿದ ಜಿಲ್ಲೆ ಎಂಬ ಮನೋಭಾವ ಬದಲಾಗಿದೆ: ನಾಗೇಂದ್ರ ಪ್ರಸಾದ್

ಮುಖ್ಯ ಅತಿಥಿಯಾಗಿದ್ದ ಕಾಲೇಜು ಶಿಕ್ಷಣ ಇಲಾಖೆ ಮೈಸೂರಿನ ಸಹಾಯಕ ನಿರ್ದೇಶಕ ಎ.ಬಿ. ನಾಗೇಂದ್ರ ಪ್ರಸಾದ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹೊರಗಿನವರಲ್ಲಿದ್ದ ಮನೋಭಾವ ಈಗ ಬದಲಾಗಿದೆ. ಜಿಲ್ಲೆಯ ಕಾಲೇಜುಗಳಿಗೆ ವರ್ಗಾವಣೆಯ ಮೂಲಕ ಬರಲು ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕರು ಉತ್ಸುಕತೆ ತೋರುತ್ತಿರುವುದು ಜಿಲ್ಲೆಯಲ್ಲಾಗಿರುವ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದರು.

ಚಾಮರಾಜನಗರ ಜಿಲ್ಲೆ ಜಾನಪದ ಕಲೆ, ಕಲಾವಿದರು, ಪುಣ್ಯಕ್ಷೇತ್ರಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳ ತವರಾಗಿದೆ. ಗಡಿಭಾಗದ ಜಿಲ್ಲೆಯಾಗಿರುವುದರಿಂದ ಇಲ್ಲಿನ ಭಾಷೆ ಹಾಗೂ ಗ್ರಾಮೀಣ ಪದ ಬಳಕೆಯಲ್ಲೂ ವಿಶಿಷ್ಟತೆ ಕಾಣಬಹುದು. ಎಲ್ಲೇ ಹೋದರೂ ನಮ್ಮ ಮಾತಿನ ಮೂಲಕವೇ ನಾವು ಚಾಮರಾಜನಗರದವರು ಎಂಬ ಗುರುತನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ವಿಶೇಷ ಸಂತೋಷವಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇಲ್ಲಿನ ಜನರಲ್ಲಿ ಇದೆ. ಚಾಮರಾಜನಗರ ಜಿಲ್ಲೆಯವರಾಗಿರುವುದನ್ನು ಪ್ರತಿಯೊಬ್ಬರೂ ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ತಿಳಿಸಿದರು.

ಜಾನಪದ ಶ್ರೀ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಅಪ್ಪಗೆರೆ ತಿಮ್ಮರಾಜು ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅನೇಕ ಕಲಾವಿದರು ಬೆಳೆದಿದ್ದಾರೆ. ಅವರ ಪ್ರತಿಭೆ ಹಾಗೂ ಅನುಭವವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಅಶ್ವಿನಿ ಆರ್.ಎಸ್. ವಹಿಸಿದ್ದರು.

ಪ್ರಾಧ್ಯಾಪಕರಾದ ಡಾ. ನೀಲಕಂಠಸ್ವಾಮಿ, ಪ್ರೊ. ರೋಹಿಣಿ ಜೆ., ಡಾ. ಶಿವಪ್ರಸಾದ್ ಎನ್.ಜಿ., ಪ್ರೊ. ನಾರಾಯಣ್ ಸಿ.ಎನ್., ಡಾ. ಮಲ್ಲೇಶ್ ಜಿ., ಡಾ. ಶಿವರಾಜು ಸಿ.ಡಿ., ಡಾ. ಚಂದ್ರಶೇಖರ್ ಎ.ಸಿ., ಡಾ. ನಾಗೇಂದ್ರಕುಮಾರ್ ಪಿ.ಎಂ., ಶ್ರೀಮತಿ ದೀಪಿತಾ ಜಿ.ಕೆ., ಡಾ. ಶಾಲಿನಿ ಎ., ಡಾ. ಚಿನ್ಮಯ್ ಭಟ್, ಪ್ರೊ. ಪಲ್ಲವಿ ಇಳಕಲ್, ಪ್ರೊ. ಲೋಕೇಶ್ ಜಿ.ಎನ್., ಶ್ರೀಮತಿ ಪೂರ್ಣಿಮಾ ವಿ.ಕೆ., ಶ್ರೀ ಮಹದೇವ ಜಿ.ಎಲ್. ಸೇರಿದಂತೆ ವಿವಿಧ ವಿಭಾಗಗಳ ಸಂಚಾಲಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ತರಗತಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *