ಮೈಸೂರು: ಮೈಸೂರು ತಾಲೂಕಿನ ವರಕೋಡು ಬೀರೇಶ್ವರಸ್ವಾಮಿ ದೇವಾಲಯದ ಬಸವ(೨೦) ಸೋಮವಾರ ಸಂಜೆ ವಯೋಸಹಜ ಸಮಸ್ಯೆಯಿಂದ ಅಸುನೀಗಿದೆ.
ಮೈಸೂರು ತಾಲೂಕಿನ ವರಕೋಡು, ಮೂಡಲಹುಂಡಿ, ಬಡಗಲಹುಂಡಿ, ಕೆಂಪೇಗೌಡನಹುಂಡಿ, ಹೊಸಹುಂಡಿಗೆ ಸೇರಿದ ಗಡಿಗ್ರಾಮದ ಬೀರೇಶ್ವರ, ಬನ್ನಿಮಹಾಕಾಳೇಶ್ವರಿ ದೇಗುಲದ ಬಸವನಾಗಿ ಕಳೆದ ೨೦ ವರ್ಷದಿಂದ ವಿವಿಧ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದ ಬಸವ ಕಳೆದ ಒಂದು ತಿಂಗಳಿಂದ ವಯೋ ಸಹಜ ಸಮಸ್ಯೆಗೆ ತುತ್ತಾಗಿತ್ತು. ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ನಾಗರಾಜ್ ನೇತೃತ್ವದ ಪಶುವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದ ಬೀರೇಶ್ವರ ದೇಗುಲ ಬಸವ ಇಂದು ಸಂಜೆ ಅಸುನೀಗಿದೆ.
ನಾಳೆ(ಮೇ.೧೨)ರಂದು ಐದು ಗ್ರಾಮಗಳಲ್ಲೂ ಬಸವನ ಪಾರ್ಥಿವ ಶರೀರವನ್ನು ಮೆರವಣಿಗೆ ನಡೆಸಿ, ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಮಧ್ಯಾಹ್ನ ವರಕೋಡು ಬೀರೇಶ್ವರಸ್ವಾಮಿ ದೇವಾಲಯದ ಮುಭಾಗದ ಆವರಣದಲ್ಲಿ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.