ಚಾಮರಾಜನಗರ: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಸಾರ್ವಜನಿಕ ಪರೀಕ್ಷೆಯಲ್ಲಿ ಸೇವಾ ಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆಯು ಶ್ಲಾಘನೀಯ ಸಾಧನೆ ಮಾಡಿದೆ. ಶಾಲೆಯಿಂದ ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳಲ್ಲಿ 42 ಮಂದಿ ಉತ್ತೀರ್ಣರಾಗಿದ್ದು, ಒಟ್ಟು ಶೇ 93.33 ಫಲಿತಾಂಶ ದಾಖಲಿಸಲಾಗಿದೆ.
ವಿಶೇಷವಾಗಿ ರಾಘವೇಂದ್ರನ್.ಡಿ ಮತ್ತು ಮಧುರ ಇಬ್ಬರೂ ತಲಾ 568 ಅಂಕಗಳು (90.88%) ಗಳಿಸಿ ಶಾಲೆಗೆ ಸಂಯುಕ್ತ ಅಗ್ರಶ್ರೇಯಾಂಕಿತರಾಗಿದ್ದಾರೆ. ತೇಜಸ್ವಿನಿ.ಎಸ್ 561 ಅಂಕಗಳು (89.76%) ಪಡೆದು ದ್ವಿತೀಯ ಸ್ಥಾನ ಪಡೆದರೆ, ಕೆ.ಶುಭ 554 ಅಂಕಗಳು (88.64%) ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಮಧುರ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿರುವುದು ವಿಶೇಷವಾಗಿದ್ದು, ಅರ್ಜುನ್.ಎನ್, ಮಧುರ ಹಾಗೂ ಕೆ.ಶುಭ ತೃತೀಯ ಭಾಷೆ ಹಿಂದಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ಗ್ರಾಮಾಂತರ ವಿದ್ಯಾರ್ಥಿಗಳಿಂದ ಶೇ 100 ಫಲಿತಾಂಶ ಲಭಿಸಿರುವುದು ಮತ್ತೊಂದು ಪ್ರಮುಖ ಸಾಧನೆಯಾಗಿದೆ. ಒಟ್ಟು 11 ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಉತ್ತಮ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳಿಗೆ ಸೇವಾ ಭಾರತಿಯ ಆಡಳಿತ ಮಂಡಳಿ ಹಾಗೂ ಶಾಲೆಯ ಶಿಕ್ಷಕ ವೃಂದ ಅಭಿನಂದನೆಗಳನ್ನು ತಿಳಿಸಿ ಶುಭಾಶಯ ಕೋರಿದ್ದಾರೆ.