- ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಕೆ
ಚಾಮರಾಜನಗರ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಉತ್ಪಾದಕರು ಮತ್ತು ನೌಕರರ ವತಿಯಿಂದ ನಗರದಲ್ಲಿ ಶಾಂತಿಯುವ ಬೃಹತ್ಮೆ ರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಉತ್ಪಾದಕರು ಮತ್ತು ನೌಕರರು ಜಾನುವಾರುಗಳೊಂದಿಗೆ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಶ್ರೀರೂಪ ಅವರ ಮುಖಾಂತರ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ ಹಾಲಿನ ಖರೀದಿ ದರವನ್ನು 10ರೂ.ಗೆ ಹೆಚ್ಚಿಸಿ ಹಾಲು ಉತ್ಪಾದಕರ ಹಾಲಿಗೆ ನ್ಯಾಯಯುತ ಬೆಲೆ ನೀಡಬೇಕು. ಹಾಲಿನ ಸರ್ಕಾರಿ ಪ್ರೋತ್ಸಾಹ ಧನವನ್ನು 5 ರೂ ನಿಂದ 10 ರೂ.ಗಳಿಗೆ ಹೆಚ್ಚಿಸಬೇಕು. ಪ್ರಸ್ತುತ ಬರಗಾಲ ಇರುವುದರಿಂದ ರಾಸುಗಳಿಗೆ ಉಚಿತ ಮೇವು ಮತ್ತು ಪಶು ಆಹಾರಕ್ಕೆ ಸರ್ಕಾರ ವತಿಯಿಂದ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಚಾಮುಲ್‌ಗೆ ಸರ್ಕಾರದಿಂದ ಬರಬೇಕಾದ 53 ಕೋಟಿ ರೂ. ಬಾಕಿ ಅನುದಾನವನ್ನು ಬಿಡುಗಡೆಗೊಳಿಸಿ ಕೊಡಬೇಕು. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರಿಗೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಪಕ್ಷ 1 ರೂ. ಪ್ರೋತ್ಸಾಹಧನವನ್ನು ಸರ್ಕಾರದ ವತಿಯಿಂದ ನೀಡಬೇಕು. ಸ್ವಂತ ಕಟ್ಟಡವಿಲ್ಲದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರದ ವತಿಯಿಂದ ಖಾಲಿ ನಿವೇಶನ ಕೊಡಸಬೇಕು. ಜಿಲ್ಲೆಯ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಖಾಲಿಯಿರುವ ಪಶುವೈದ್ಯರನ್ನು ನೇಮಿಸಿಕೊಡಬೇಕು ಒತ್ತಾಯಿಸಿದರು.
ಮೆರವಣಿಗೆಯಲ್ಲಿ ಚಾಮುಲ್ ನಿರ್ದೇಶಕರಾದ ಹೆಚ್.ಎಚ್.ನಂಜುಂಡಪ್ರಸಾದ್, ಸದಾಶಿವಮೂರ್ತಿ, ಸುನೀಲ್, ಶಾಹುಲ್ ಅಹಮದ್, ಶೀಲಾ ಪುಟ್ಟರಂಗಶೆಟ್ಟಿ, ಹೆಚ್.ಎಸ್.ಬಸವರಾಜು, ಉದ್ದನೂರು ಪ್ರಸಾದ್, ವೈ.ಸಿ.ನಾಗೇಂದ್ರ, ಕೆ.ಕೆ .ರೇವಣ್ಣ ಹಾಗೂ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಉತ್ಪಾದಕರು ಮತ್ತು ನೌಕರರ, ಹಾಲು ಉತ್ಪಾದಕರು ಭಾಗವಹಿಸಿದ್ದರು.
