- ಕನ್ನಡಿಗರು ಮತ್ತು ತಮಿಳರ ನಡುವೆ ಬೆಂಕಿ ಹಚ್ಚುವ ಯತ್ನ : ಹೆಚ್.ಎನ್.ಮಂಜೇಶ್ ಅಕ್ರೋಶ
ಚಾಮರಾಜನಗರ: ಹನೂರು ಶೂಟೌಟ್ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ತಮಿಳುನಾಡು ರಾಜಕಾರಣಿಗಳ ಧೋರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡರ ಬಣದ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎನ್.ಮಂಜೇಶ್ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹನೂರು ಶೂಟೌಟ್ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ತಮಿಳುನಾಡು ರಾಜಕಾರಣಿಗಳ ಧೋರಣೆ, ಕನ್ನಡಿಗರು- ತಮಿಳರ ನಡುವೆ ಸೌಹಾರ್ದತೆ ಕದಡುವ ಪ್ರಯತ್ನ ವಾಗಿದೆ ಎಂದು ಆರೋಪಿಸಿದರು.
ಅರಣ್ಯ ಇಲಾಖೆ ಶೂಟ್‌ಔಟ್ ಪ್ರಕರಣವನ್ನು ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ಹಾಗೂ ಕನ್ನಡಿಗರು ಮತ್ತು ತಮಿಳರ ನಡುವೆ ಬೆಂಕಿ ಹಚ್ಚುವ ಯತ್ನ ನಡೆಸುತ್ತಿರುವುದು ಅತ್ಯಂತ ಖಂಡನೀಯ. ಈ ಘಟನೆಗೆ ಭಾಷಾ ಆಯಾಮ ನೀಡಿ, ಕರ್ನಾಟಕದಲ್ಲಿ ತಮಿಳರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬಿಂಬಿಸಲು ತಮಿಳುನಾಡಿನ ರಾಜಕಾರಣಿಗಳು ನಡೆಸುತ್ತಿರುವ ಹತಾಶ ಯತ್ನವನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ.
ಈ ಪ್ರಕರಣದ ಸತ್ಯಾಸತ್ಯತೆ ತನಿಖೆಯ ಹಂತದಲ್ಲಿದೆ. ರಾಜ್ಯ ಸರ್ಕಾರ ಈಗಾಗಲೇ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದು, ತನಿಖೆಯಿಂದ ಹೊರಬರುವ ಸತ್ಯಗಳು ಸಾರ್ವಜನಿಕವಾಗಿ ಹೊರಬರಲಿವೆ. ತನಿಖೆ ಪೂರ್ಣಗೊಳ್ಳುವ ಮೊದಲೇ ನೆರೆಯ ರಾಜ್ಯದ ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಆರೋಪ ಮಾಡುವುದು ಮತ್ತು ತನಿಖೆಯ ದಿಕ್ಕು ತಪ್ಪಿಸುವುದು ಸರಿಯಲ್ಲ. ತಮಿಳುನಾಡು ಸರ್ಕಾರವು ಪರಿಹಾರ ಘೋಷಿಸಿರುವುದು ಮತ್ತು ಅಲ್ಲಿನ ನಾಯಕರು ಕರ್ನಾಟಕದ ಆಂತರಿಕ ವಿಷಯದಲ್ಲಿ ಮೂಗು ತೂರಿಸುತ್ತಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಲಕ್ಷಾಂತರ ತಮಿಳರು ದಶಕಗಳಿಂದ ಕನ್ನಡಿಗರೊಂದಿಗೆ ಸೌಹಾರ್ದಯುತವಾಗಿ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಎಲ್ಲ ರೀತಿಯ ಸರ್ಕಾರಿ ಸವಲತ್ತುಗಳನ್ನು ನೀಡುತ್ತಿದೆ. ಕಾವೇರಿ ವಿವಾದದ ಸಂದರ್ಭದಲ್ಲಿ ಇಲ್ಲದ ಕಾಳಜಿ ಈಗ ರಾಜಕೀಯ ಲಾಭಕ್ಕಾಗಿ ಮುನ್ನೆಲೆಗೆ ಬರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಕನ್ನಡಿಗರು ಮತ್ತು ತಮಿಳರ ನಡುವಿನ ಸಾಮರಸ್ಯವನ್ನು ಹಾಳುಮಾಡಲು ಯತ್ನಿಸುವವರಿಗೆ ತಕ್ಕ ಉತ್ತರ ನೀಡಲಾಗುವುದು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಇಂತಹ ದ್ವಂದ್ವ ನೀತಿಯನ್ನು ಮತ್ತು ರಾಜಕೀಯ ಗಿಮಿಕ್‌ಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಚಾಮರಾಜನಗರ ಜಿಲ್ಲಾಧ್ಯಕ್ಷ ಮಂಜೇಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ರೂಪೇಶ್, ಜಿಲ್ಲಾ ಸಹ ಕಾರ್ಯದರ್ಶಿ ಅರ್ಜುನ ಸುರಾಗ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ್, ಜಿಲ್ಲಾ ಕಾರ್ಯದರ್ಶಿ ಕುಮಾರ ಸಂದೀಪ್, ತಾಲೂಕು ಅಧ್ಯಕ್ಷ ಸಂತೋಷ್ ಹಂಡರಕಳ್ಳಿ, ಗೌರವಾಧ್ಯಕ್ಷ ಲಿಂಗರಾಜು ಹಾಜರಿದ್ದರು.
