- ಬೀದಿ ನಾಟಕದ ಮೂಲಕ ದೇಶಭಕ್ತಿ, ದೇಶಪ್ರೇಮ ಹಾಗೂ ಸ್ವಚ್ಛತೆ ಕುರಿತು ಅರಿವು
ಚಾಮರಾಜನಗರ: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಬಂಜಾರ ಇಂಡಿಯನ್ ಶಾಲೆಯ ವತಿಯಿಂದ ಸಾರ್ವಜನಿಕರು ಹಾಗೂ ಮಕ್ಕಳಲ್ಲಿ ದೇಶಪ್ರೇಮ, ದೇಶಭಕ್ತಿ, ಸ್ವಚ್ಛ ಭಾರತ ಮತ್ತು ಸ್ವಾತಂತ್ರ್ಯೋತ್ಸವದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಾಗೃತಿ ಜಾಥಾಕ್ಕೆ ಬಂಜಾರ ಎಜುಕೇಶನ್ ಅಂಡ್ ಸೋಷಿಯಲ್ ಟ್ರಸ್ಟ್ ಅಧ್ಯಕ್ಷ ಶಿವಾಜಿ ಆರ್. ಮೆಘಾವತ್ ಚಾಲನೆ ನೀಡಿದರು. ಶಾಲಾ ಮಕ್ಕಳು ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ದೇಶಪ್ರೇಮ, ದೇಶಭಕ್ತಿ ಹಾಗೂ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ಕುರಿತು ಜಾಗೃತಿ ಮೂಡಿಸಿದರು.
ಜಾಗೃತಿ ಜಾಥಾವು ಭುವನೇಶ್ವರಿ ರಸ್ತೆ ಹಾಗೂ ಬಿ. ರಾಚಯ್ಯ ಜೋಡಿ ರಸ್ತೆಯ ಮೂಲಕ ಸಾಗಿ ಜಿಲ್ಲಾಡಳಿತ ಭವನದ ಮುಂಭಾಗ ತಲುಪಿತು. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಸಂತೋಷ್, “ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕರು ಹಾಗೂ ಮಕ್ಕಳಲ್ಲಿ ದೇಶಪ್ರೇಮ, ದೇಶಭಕ್ತಿ ಮತ್ತು ಸ್ವಾತಂತ್ರ್ಯೋತ್ಸವದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬಂಜಾರ ಇಂಡಿಯನ್ ಶಾಲೆಯ ವತಿಯಿಂದ ಈ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಜಗದೀಶ್ ನಾಯಕ್, ಮುಖ್ಯಶಿಕ್ಷಕ ಸಂತೋಷ್, ಶಿಕ್ಷಕರಾದ ರಾಜೇಂದ್ರ, ಸಾಧನ ಹಾಗೂ ನಯನಾ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.
