ರಕ್ತದಾನ ಪವಿತ್ರ ದಾನ : ಸಚಿವ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ರಕ್ತದಾನವು ಒಂದು ಪವಿತ್ರ ದಾನವಾಗಿದು, ತುರ್ತು ಸಂದರ್ಭದಲ್ಲಿ ಅಮೂಲ್ಯವಾದ ಜೀವ ಉಳಿಸುವಲ್ಲಿ ರಕ್ತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. 

ಚಾಮರಾಜನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ತುರ್ತು ವೈದ್ಯಕಿಯ ಪರಿಸ್ಥಿತಿಯಲ್ಲಿ ರಕ್ತ ನೀಡುವುದು ಅವಶ್ಯಕವಾಗಿರುತ್ತದೆ. ರಕ್ತ ನೀಡಿದ ನಂತರ ಕೆಲವು ದಿನಗಳಲ್ಲಿ ದೇಹದಲ್ಲಿ ಮತ್ತೆ ರಕ್ತ ವೃದ್ಧಿಯಾಗುವುದರಿಂದ ರಕ್ತದಾನ ಮಾಡುವವರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಆರೋಗ್ಯವಂತರು, ಯುವಜನರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯವಾಗಬೇಕು ಎಂದು ಸಚಿವರು ತಿಳಿಸಿದರು.

2008ರಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ರಕ್ತ ಶೇಖರಣೆ ಮಾಡಲು ಕಟ್ಟಡ ನಿರ್ಮಾಣ ಮಾಡಿ ರಕ್ತ ಕೆಂದ್ರವನ್ನು ಪ್ರಾರಂಭ ಮಾಡಲಾಯಿತು. 2013ರಲ್ಲಿ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾ ವೈದ್ಯಕೀಯ ಕಾಲೇಜು ಪ್ರಾರಂಭವಾಗಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೃದಯಘಾತ ಮತ್ತು ಕ್ಯಾನ್ಸರ್ ನಂತಹ ರೋಗಗಳಿಗೆ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು 150 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿದ್ದು, ಮಂಜೂರಾತಿ ಹಂತದಲ್ಲಿದೆ. ಇದು 150 ಹಾಸಿಗೆಯುಳ್ಳ ಆಸ್ಪತ್ರೆಯಾಗಿದ್ದು ಅನುಮೋದನೆ ದೊರೆತರೆ ಜಿಲ್ಲಾ ಕೇಂದ್ರದಲ್ಲೇ ಎಲ್ಲ ಸೌಲಭ್ಯಗಳು ಲಭ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಇದೆ ವೇಳೆ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ಮತ್ತು ಹಣ್ಣು, ಜ್ಯೂಸ್ ನೀಡಲಾಯಿತು.

ಈ ವೇಳೆ ಸಿಇಒ‌ ಆಕೃತಿ ಬನ್ಸಲ್, ಎಡಿಸಿ ಪ್ರಿಯದರ್ಶಿನಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಎನ್. ನೀಲಾದೇವಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ರವಿಕುಮಾರ್, ಸಿಮ್ಸ್ ನ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಚಿನ್ನ ಭೋವಿ, ವೈದ್ಯಕೀಯ ಅಧೀಕ್ಷಕರಾದ ಡಾ. ಮಾರುತಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ. ರೇಣುಕಾದೇವಿ, ಸಿಮ್ಸ್ ನ ರಕ್ತ ಕೇಂದ್ರದ ಡಾ. ವಿದ್ಯಾಶ್ರೀ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *