ಬಸವಮಾರ್ಗದಿಂದ ಸರ್ಕಾರಿ ಶಾಲೆಗೆ ಬಸ್ ಕೊಡುಗೆ

  • ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕೆಂದು ವಿತರಣೆ

ಮೈಸೂರು : ನಗರದ ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲೆಂದು ಬಸವಮಾರ್ಗ ಫೌಂಡೇಶನ್ ವತಿಯಿಂದ ಸೋಮವಾರ ಉಚಿತವಾಗಿ ಬಸ್ ಕೊಡುಗೆ ನೀಡಲಾಯಿತು.

ಕುಕ್ಕರಹಳ್ಳಿ ಶಾಲೆ ಆವರಣದಲ್ಲಿ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್.ಬಸವರಾಜು, ಶಾಲೆಯ ಮುಖ್ಯ ಶಿಕ್ಷಕ ಚಂದ್ರ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಬಸ್ ಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಎಸ್.ಬಸವರಾಜು, ಶಿಕ್ಷಣ ಕ್ಷೇತ್ರಕ್ಕೆ ಏನಾದರೂ ಕೊಡುಗೆ‌ ನೀಡಬೇಕು ಎನ್ನುವ ನಿಟ್ಟಿನಲ್ಲಿ ಕುಕ್ಕರಹಳ್ಳಿ ಸರ್ಕಾರಿ ‌ಶಾಲೆಯನ್ನು ದತ್ತು ಪಡೆಯಲಾಯಿತು. ಬಸವಮಾರ್ಗ ಫೌಂಡೇಶನ್ ವತಿಯಿಂದ ಶಾಲೆಗೆ ಹಲವಾರು ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಶಾಲೆಯ ವಿದ್ಯಾರ್ಥಿಗಳು ದೂರದೂರುಗಳಿಂದ ಶಾಲೆಗೆ ಬರುತ್ತಿದ್ದರು. ಇದನ್ನು ಮನಗಂಡು ಈ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಲಾಗಿದೆ. ಅದರಂತೆ ವಿದ್ಯಾರ್ಥಿನಿಯರಿಗೆ ಬಸ್ ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಿಂದ ಅವರ ವ್ಯಾಸಂಗಕ್ಕೆ ಅನುಕೂಲವಾಗಿ ಮಕ್ಕಳು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಕೋರಿದರು.

ಮುಖ್ಯ ಶಿಕ್ಷಕ ಚಂದ್ರ ಮಾತನಾಡಿ, ಸರ್ಕಾರಿ ಶಾಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬಸವರಾಜು ಅಂತವರ ದಾನಿಗಳ‌ ಕೊಡುಗೆ ಅಪಾರ. ತಾನು ಬೆಳೆಯಲು ನೆರವಾದ ಸಮಾಜಕ್ಕೆ‌ ಏನಾನ್ನಾದರೂ ಕೊಡುಗೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಬಸವರಾಜು ಅವರು ಮಾಡುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳು ಬಸ್ ಸೌಲಭ್ಯವನ್ನು ತಮ್ಮ ವ್ಯಾಸಂಗದ ಅನುಕೂಲಕ್ಕಾಗಿ ಸದ್ಬಳಕೆ‌ ಮಾಡಿಕೊಂಡು ಚೆನ್ನಾಗಿ ಓದಬೇಕು. ಆ ಮೂಲಕ ಓದಿದ ಶಾಲೆಗೂ, ಕೊಡುಗೆ ನೀಡಿದ ದಾನಿಗಳಿಗೂ ಕೀರ್ತಿ ತರಬೇಕು ಎಂದು ಶುಭಕೋರಿದರು.

ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ಮಾತನಾಡಿ, ಬಸವಮಾರ್ಗದಿಂದ ಕಳೆದ ಎರಡು ವರ್ಷದಿಂದ ಬಸ್ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ದೂರದೂರುಗಳಿಂದ ಶಾಲೆಗೆ ಬರುವಾಗ ಸಮಸ್ಯೆಯಾಗುತ್ತಿತ್ತು. ಸರಿಯಾಗಿ ಬಸ್ ಸಿಗೆದ ನಿಗದಿತ ಸಮಯಕ್ಕೆ ತರಗತಿಗೆ ಹಾಜರಾಗಲು ಕೊಡಲಾಗುತ್ತಿತ್ತು. ಈಗ ಆ ಸಮಸ್ಯೆ ಇಲ್ಲ. ಬಸ್ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಅಂಕ ಗಳಿಸುವ ಮೂಲಕ ಶಾಲೆ ಹಾಗೂ ದಾನಿಗಳಿಗೆ ಕೀರ್ತಿ ತರಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *