ಮಕ್ಕಳ ಹಕ್ಕುಗಳ ರಕ್ಷಣೆ ಪ್ರಜ್ಞಾವಂತ ನಾಗರಿಕರ ಕರ್ತವ್ಯ : ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ

ಚಾಮರಾಜನಗರ: ಈ ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ತಿಳಿಸಿದರು.

   ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ವಕೀಲರ ಸಂಘ ಹಾಗೂ ಭಾರತೀಯ ಮಕ್ಕಳ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸುರಕ್ಷತೆ, ಕಾನೂನು ನೆರವು ಮತ್ತು ಶಿಫಾರಸ್ಸು ಕಾರ್ಯವಿಧಾನಗಳ ಬಲವರ್ಧನೆಗಾಗಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಸಮನ್ವಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಮಕ್ಕಳು ಈ ದೇಶದ ಭವಿಷ್ಯ. ಮಕ್ಕಳ ರಕ್ಷಣೆಗಾಗಿ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೊಳಿಸಿದ್ದರೂ ಆಗಾಗ್ಗೆ ಮಕ್ಕಳ ಮೇಲೆ ದೌರ್ಜನ್ಯ, ತಾರತಮ್ಯ, ಶೋಷಣೆ ಹಾಗೂ ಕಳ್ಳಸಾಗಣೆಯಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಪ್ರತಿ ಮಗುವು ಉಚಿತ ಕಾನೂನು ಸಲಹೆ, ನೆರವಿಗೆ ಅರ್ಹವಾಗಿವೆ. ಅಪಾಯದಲ್ಲಿರುವ ಮಕ್ಕಳಿಗೆ ನ್ಯಾಯ ದೊರಕಿಸಿ ಆಶ್ರಯ, ವೈದ್ಯಕೀಯ ಸಹಾಯ ನೀಡಿ ಉತ್ತಮ ಭವಿಷ್ಯ ರೂಪಿಸುವುದು ಪೊಲೀಸ್, ಮಕ್ಕಳ ಕಲ್ಯಾಣ ಸಮಿತಿ, ಸಂಘಸಂಸ್ಥೆಗಳು ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

   ಬಾಲ್ಯವಿವಾಹ ಮುಕ್ತ, ದೌರ್ಜನ್ಯ ಹಾಗೂ ಶೋಷಣೆ ಮುಕ್ತ ಜಿಲ್ಲೆಯನ್ನಾಗಿಸಿ ಮಕ್ಕಳಿಗೆ ಸುರಕ್ಷತೆಯ ವಾತಾವರಣ ಒದಗಿಸುವುದು ಈ ಕಾರ್ಯಾಗಾರದ ಮುಖ್ಯ ಸದುದ್ದೇಶವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಯಾವುದೇ ಗೊಂದಲ, ಸಮಸ್ಯೆಗಳಿದ್ದರೂ ನುರಿತ ತಜ್ಞರಿಂದ ಪರಿಹರಿಸಿಕೊಳ್ಳಬೇಕು. ಒಟ್ಟಾರೆ ಕಾರ್ಯಾಗಾರಗಳು ಕೇವಲ ಚರ್ಚೆಗೆ ಸೀಮಿತವಾಗದೇ ಸದ್ಭಳಕೆಯಾಗಬೇಕು. ಕಾರ್ಯಾಗಾರದ ಯಶಸ್ಸು ಮಕ್ಕಳ ಸಂರಕ್ಷಣೆಯಲ್ಲಿ ಅಡಗಿದೆ. ಇದಕ್ಕಾಗಿ ಎಲ್ಲಾ ಇಲಾಖೆಗಳ ಸಹಭಾಗಿತ್ವ ಅವಶ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ತಿಳಿಸಿದರು.

   ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ನ್ಯಾಯಾಧೀಶರಾದ ಎಚ್. ಶಶಿಧರ ಶೆಟ್ಟಿ ಅವರು ಘನ ಉಪಸ್ಥಿತಿ ವಹಿಸಿ ಮಾತನಾಡಿ ಸೂಕ್ಷ್ಮ ಮನಸ್ಸಿನ ಮಕ್ಕಳು ಬಾಲ್ಯದಲ್ಲಿ ದೌರ್ಜನ್ಯಕ್ಕೆ ಒಳಗಾದರೇ ಜೀವನದುದ್ದಕ್ಕೂ ಅದು ಕೆಟ್ಟ ಕನಸಾಗಿ ಕಾಡಲಿದೆ. ಮಕ್ಕಳಿಗೆ ಮಾನಸಿಕ ಧೈರ್ಯ, ಸ್ಥೈರ್ಯ ತುಂಬುವುದು ತಂದೆತಾಯಿ ಸೇರಿದಂತೆ ಸಮಾಜದ ಎಲ್ಲರ ಆದ್ಯ ಕರ್ತವ್ಯವಾಗಿದೆ. ಮಕ್ಕಳಿಗೆ ಸಾಕಷ್ಟು ಕನಸುಗಳಿರುತ್ತದೆ. ಅವುಗಳನ್ನು ಎಳ ವಯಸ್ಸಿನಲ್ಲಿ ಚಿವುಟಿ ಹಾಕಬಾರದು. ಪ್ರಪಂಚದಾದ್ಯಂತ ದೊಡ್ಡ ಜಾಲವಾಗಿ ಬೆಳೆದಿರುವ ಮಾನವ ಕಳ್ಳಸಾಗಣೆಯ ಕುರಿತು ಗಂಭೀರ ಚಿಂತನೆ ಅಗತ್ಯವಾಗಿದೆ ಎಂದು ತಿಳಿಸಿದರು. 

   ಯಾವುದೇ ಮಗು ಸಂಶಯಾಸ್ಪದವಾಗಿ ಕಂಡುಬಂದರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಕ್ಕಳನ್ನು ರಕ್ಷಿಸಬೇಕಿದೆ. ಅದೇ ನಾವು ಸಮಾಜಕ್ಕೆ ನೀಡುವ ಉತ್ತಮ ಕೊಡುಗೆಯಾಗಲಿದೆ. ಮಕ್ಕಳಿಗೆ ಮನೆಯಲ್ಲಿ ಸಂಬಂಧಿಗಳಿಂದ, ಶಾಲೆಗಳಲ್ಲಿ ಕೆಲ ಶಿಕ್ಷಕರಿಂದ ಮಕ್ಕಳಿಗೆ ದೌರ್ಜನ್ಯ ನಡೆಯುತ್ತಿರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಸಾಕಷ್ಟು ಫೋಕ್ಸೋ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ. ಬಾಲಕಾರ್ಮಿಕ ಮಕ್ಕಳು ಇದ್ದಾರೆ. ಇದೆಲ್ಲದರ ನಿವಾರಣೆಗಾಗಿ ಗ್ರಾಮಮಟ್ಟದಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ, ಜನದಟ್ಟಣೆ ಪ್ರದೇಶಗಳಾದ ಸಂತೆ, ಜಾತ್ರಾ ಸ್ಥಳಗಳಲ್ಲಿ ವ್ಯಾಪಕ ಜನಜಾಗೃತಿ ಮೂಡಿಸಬೇಕಾಗಿದೆ ಎಂದು ನ್ಯಾಯಾಧೀಶರಾದ ಎಚ್. ಶಶಿಧರ ಶೆಟ್ಟಿ ಅವರು ಹೇಳಿದರು.
   ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಮಾತನಾಡಿ ಬಾಲ್ಯವಿವಾಹ ಫೋಕ್ಸೋ ಪ್ರಕರಣಗಳ ತಡೆಗಾಗಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಆದರೂ ಜನರು ಧೈರ್ಯದಿಂದ ದೂರು ನೀಡಲು ಮುಂದೆ ಬರುತ್ತಿರುವುದು ಆಶಾದಾಯಕವಾಗಿದೆ. ಉತ್ತಮ ಸ್ವಾಸ್ಥ್ಯ ಸಮಾಜ ನಿರ್ಮಾಣ, ಜನರ ನಿರೀಕ್ಷೆಗೆ ತಕ್ಕಂತೆ ನಮ್ಮ ಕಾರ್ಯವಿಧಾನ ಬದಲಾಯಿಸಿಕೊಳ್ಳುವ ಅವಶ್ಯವಿದೆ ಎಂದರು.

   ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಮಸಮುದ್ರ ಪುಟ್ಟಸ್ವಾಮಿ ಮಾತನಾಡಿ ಮಕ್ಕಳು ಕಾನೂನಿನ ರಕ್ಷಣೆ ಪಡೆಯಲು ಶಿಕ್ಷಣ ಪಡೆಯಬೇಕು. ಜ್ಞಾನವಂತರಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಪ್ರತಿಯೊಬ್ಬರ ಜೀವನ ಪರಿವರ್ತನೆಗೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಆಗಮಾತ್ರ ಭಾರತ ಪ್ರಬುಧ್ಧ ದೇಶವಾಗಲಿದೆ ಎಂದರು.

   ಇದೇ ವೇಳೆ ಕಾರ್ಯಕ್ರಮದಲ್ಲಿ ಗಣ್ಯರು ಜನಜಾಗೃತಿ ಮೂಡಿಸುವ ಮಾನವ ಕಳ್ಳಸಾಗಣೆ, ಬಾಲ್ಯವಿವಾಹ ಮುಕ್ತ, ಗೃಹಹಿಂಸೆ, ದೌರ್ಜನ್ಯಮುಕ್ತ ಭಿತ್ತಿಪತ್ರಗಳು ಹಾಗೂ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿದರು. 

   ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪಾಟೀಲ್, ಕೆ.ಎಸ್.ಸಿ.ಪಿ.ಸಿ.ಆರ್ ಸದಸ್ಯರಾದ ವೆಂಕಟೇಶ್, ಭಾರತೀಯ ಮಕ್ಕಳ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೇಮಂತ್ ಕುಮಾರ್, ಸರ್ಕಾರದ ಯುನಿಸೆಫ್ ವಲಯ ಸಂಯೋಜಕರು ಹಾಗೂ ಕೊಪ್ಪಳದ ಮಕ್ಕಳ ರಕ್ಷಣಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ. ಕೆ. ರಾಘವೇಂದ್ರಭಟ್, ನಿವೃತ್ತ ನ್ಯಾಯಾಧೀಶರಾದ ಚೆನ್ನಕೇಶವ ರೆಡ್ಡಿ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮ್, ಇತರರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.  

  ಆರಂಭದಲ್ಲಿ ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ, ನಟರಾಜು ತಂಡದಿಂದ ನಡೆಸಿಕೊಟ್ಟ ಗೀತಗಾಯನ ಕಾರ್ಯಕ್ರಮ ಗಮನ ಸೆಳೆಯಿತು. ವೇದಿಕೆ ಕಾರ್ಯಕ್ರಮದ ಬಳಿಕ ಮಕ್ಕಳ ಹಕ್ಕುಗಳ ರಕ್ಷಣೆಯ ಕಾನೂನು ರಕ್ಷಣೆಯ ಅರಿವು-ನೆರವು ಕುರಿತು ಗೋಷ್ಠಿಗಳು ನಡೆದವು.

Leave a Reply

Your email address will not be published. Required fields are marked *