
ಚಾಮರಾಜನಗರ: ಮಕ್ಕಳ ಮೇಲಾಗುವ ದೌರ್ಜನ್ಯದಿಂದ ದಾಖಲಾಗುವ ಫೋಕ್ಸೋ ಪ್ರಕರಣಗಳ ಬಗ್ಗೆ ನಾಗರಿಕ ಸಮಾಜ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಎಚ್. ಶಶಿಧರ ಶೆಟ್ಟಿ ಅವರು ತಿಳಿಸಿದರು.
ನಗರದ ಸೇವಾ ಭಾರತಿ ಪಬ್ಲಿಕ್ ಶಾಲೆಯಲ್ಲಿಂದು ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸೇವಾ ಭಾರತಿ ಪಬ್ಲಿಕ್ ಶಾಲೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಾದಕ ವ್ಯಸನ ಮತ್ತು ಫೋಕ್ಸೊ ಕಾಯ್ದೆ-2012’ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕಾದವರೆ ದೌರ್ಜನ್ಯ ಎಸಗಿದರೆ ಅದು ಗಂಭೀರ ಹಾಗೂ ಶಿಕ್ಷಾರ್ಹ ಅಪರಾಧವಾಗಲಿದೆ. ಇತ್ತೀಚೆಗೆ ಮಕ್ಕಳಿಗೆ ಮನೆಯಲ್ಲಿ ಹಾಗೂ ಶಾಲೆಗಳಲ್ಲಿ ದೌರ್ಜನ್ಯಗಳಾಗುತ್ತಿರುವುದು ಕಂಡುಬಂದಿದೆ. ಮಕ್ಕಳ ದೇಹ- ಮಕ್ಕಳ ಹಕ್ಕಾಗಿದ್ದು, ಅವರ ಮೇಲೆ ಹೊರಗಿನವರು ದೌರ್ಜನ್ಯ ಎಸಗಲು ಮಕ್ಕಳು ಅವಕಾಶ ನೀಡಬಾರದು. ಅಂತಹ ಸಂದರ್ಭದಲ್ಲಿ ಮಕ್ಕಳು ಧೈರ್ಯವಾಗಿ ದೂರು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಕಾನೂನಿನ ಅರಿವು ಮುಖ್ಯವಾಗಿದೆ. ಬಾಲ್ಯದಲ್ಲಿ ಮಕ್ಕಳು ದಾರಿ ತಪ್ಪಬಾರದು. ಪ್ರಬುದ್ಧತೆ ಬರುವವರೆಗೆ ತಾಳ್ಮೆಯಿಂದ ಕಾಯಬೇಕು ಎಂದರು.
ಮಕ್ಕಳಿಗೆ ಬಾಲ್ಯದಿಂದಲೇ ಕಾನೂನಿನ ಅರಿವು ನೀಡದಿರುವುದು ನಮ್ಮ ವ್ಯವಸ್ಥೆಯ ನ್ಯೂನತೆಯಾಗಿದೆ ಎಂದರೇ ತಪ್ಪಾಗಲಾರದು. ಕಾನೂನನ್ನು ಅರಿತು ಗೌರವಿಸಿದರೆ ಕಾನೂನು ನಮಗೆ ರಕ್ಷಣೆ ನೀಡಲಿದೆ. ಲೈಂಗಿಕ ದೌರ್ಜನ್ಯಗಳು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಸಮೀಕ್ಷೆಯ ಪ್ರಕಾರ ಶೇ.44ರಷ್ಟು ಗಂಡುಮಕ್ಕಳು ಇಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲೆಯಲ್ಲಿ 2025ರಲ್ಲಿ 90 ಫೋಕ್ಸೋ ಪ್ರಕರಣಗಳು ದಾಖಲಾಗಿವೆ. ಮಕ್ಕಳ ಹಕ್ಕುಗಳ ಸಂರಕ್ಷಣೆ ಸರ್ಕಾರದ ಎಲ್ಲಾ ಇಲಾಖೆಗಳು, ಸಂಘಸಂಸ್ಥೆಗಳ ಜವಾಬ್ದಾರಿಯಾಗಿದೆ. ಬಾಲ್ಯವಿವಾಹ ಎಲ್ಲಿಯೇ ಕಂಡುಬಂದರೂ ಮಕ್ಕಳು ಅದನ್ನು ವಿರೋಧಿಸಬೇಕು. ಉತ್ತಮ ಜೀವನ ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಹೇಳಿದರು.
ಸಾಮಾಜಿಕ ಪಿಡುಗು ಪರಿಣಮಿಸಿರುವ ಗಾಂಜಾ, ಹೆರಾಯಿನ್, ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು, ಆಲ್ಕೋಹಾಲ್ ನಂತಹ ಮಾದಕ ವಸ್ತುಗಳ ಸೇವನೆ ವಿರುದ್ಧ ಮಕ್ಕಳಿಗೆ ಈಗಿನಿಂದಲೇ ಜಾಗೃತಿ ಮೂಡಿಸುವ ಅವಶ್ಯವಿದೆ. ಕುತೂಹಲಕ್ಕಾಗಿ ತೆಗೆದುಕೊಳ್ಳ್ಳುವ ಮಾದಕ ವಸ್ತುಗಳು ಮುಂದೆ ಬಿಡಿಸಲಾಗದ ಚಟವಾಗಿ ಬದಲಾಗಲಿವೆ. ಯುವಜನತೆ ಈ ದೇಶದ ಪ್ರಮುಖ ಆಸ್ತಿಯಾಗಿದ್ದು, ಮದ್ಯ ಹಾಗೂ ಮಾದಕ ಪದಾರ್ಥಗಳ ಸೇವನೆ ವಿರುದ್ಧ ಹೆಚ್ಚಿನ ಜನಜಾಗೃತಿ ಅಗತ್ಯವಾಗಿದೆ. ಚಿಕ್ಕಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಹೆಚ್ಚಿನ ಅರಿವು ಮೂಡಿಸಬೇಕು ಶಶಿಧರಶೆಟ್ಟಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಖಜಾಂಚಿ ಮಂಜುನಾಥ್ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅವರು ಕಾರ್ಯಕ್ರಮದಲ್ಲಿ ಮದ್ಯ ಹಾಗೂ ಮಾದಕ ಪದಾರ್ಥಗಳ ಸೇವನೆ ದುಷ್ಪರಿಣಾಮಗಳು ಹಾಗು ಫೋಕ್ಸೋ ಪ್ರಕರಣಗಳನ್ನು ತಡೆಯುವ ಕ್ರಮಗಳ ಬಗ್ಗೆ ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿಗಳಾದ ಎಂ. ಶ್ರೀಧರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಎಸ್. ಚಂದ್ರಪಾಟೀಲ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಟಿ. ವೆಂಕಟೇಶ್, ಸೇವಾ ಭಾರತಿ ಪಬ್ಲಿಕ್ ಶಾಲೆ ಪ್ರಾಂಶುಪಾಲರಾದ ವಿ.ಎನ್. ರಾಧಿಕಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.