ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ: ಮಂಗಲ ಶಿವಕುಮಾರ್

  • ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಹಬ್ಬ ಕಾರ್ಯಕ್ರಮ.

ಚಾಮರಾಜನಗರ: ಪರೀಕ್ಷೆಯನ್ನು ಹಬ್ಬದಂತೆ ಆಚರಿಸಬೇಕು ಹಬ್ಬ ಸಮಯದಂತೆ ತಯಾರಾಗಿ ಖುಷಿ ಖುಷಿಯಿಂದ ಹೋಗಬೇಕು. ಯಾವುದೇ ಕಾರಣಕ್ಕೂ ಭಯ, ಆತಂಕ ಪಡಬಾರದು ಎಂದು ರೋಟರಿ ಕ್ಲಬ್ ಆಫ್ ಎಲೈಟ್ ಮೈಸೂರು ಅಧ್ಯಕ್ಷ ಮಂಗಲ ಶಿವಕುಮಾರ್ ಹೇಳಿದರು.

ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಎಲೈಟ್ ಮೈಸೂರು ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರೀಕ್ಷೆ ಹೇಗೆ ತಯಾರಾಗಬೇಕು, ಮತ್ತು ಹೇಗೆ ಎದುರಿಸಬೇಕು ಎಂಬ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಬ್ಬದ ರೀತಿಯಲ್ಲಿ ಸಂಭ್ರಮಿಸಿ ಪರೀಕ್ಷೆಯನ್ನು ಬರೆಯಬೇಕು ಎಂದು ತಿಳಿಸಿದರು.

ಯಾವ ಪಠ್ಯ ನಿಮಗೆ ಕಠಿಣವೆನಿಸುತ್ತಿದೆಯೋ ಮೊದಲು ಅದನ್ನು ಮನನ ಮಾಡಿಕೊಳ್ಳಿ, ಅಲ್ಲಿಂದಲೇ ಓದು ಆರಂಭಿಸಿ, ಸರಳವೆನಿಸಿದ್ದನ್ನು ನಂತರ ಓದಿಕೊಳ್ಳಿರಿ. ಪಠ್ಯದ ಕೆಳಗಡೆ ನೀಡಿರುವ ಪ್ರಶ್ನೆಗಳನ್ನಷ್ಟೆ ಬಿಡಿಸಿ ಸುಮ್ಮನಾಗಬೇಡಿರಿ. ಅವು ಪ್ರಶ್ನೆ ಪತ್ರಿಕೆಯಲ್ಲಿ ಬರುವುದು ಕಡಿಮೆ. ಹೀಗಾಗಿ ಇಡೀ ಪಾಠ ತಿಳಿದುಕೊಳ್ಳಬೇಕು. ಪ್ರತಿ 45 ನಿಮಿಷಗಳ ಓದಿನ ನಂತರ 5 ನಿಮಿಷ ವಿಶ್ರಾಂತಿ ಪಡೆಯಿರಿ. ಪರೀಕ್ಷಾ ಸಮಯದಲ್ಲಿ ಮೊಬೈಲ್‌, ಲ್ಯಾಪ್‌ಟ್ಯಾಪ್‌, ಟಿವಿ, ಸಾಮಾಜಿಕ ಜಾಲತಾಣಗಳಿಂದ ದೂರ ಇರಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅನೇಕ ಸ್ಥಳೀಯ ಸವಾಲುಗಳಿದ್ದು ಪೋಷಕರು ಹೆಣ್ಣು ಮಕ್ಕಳ ಬಗ್ಗೆ ಇರುವ ಕಾಳಜಿಯನ್ನು ಗಂಡು ಮಕ್ಕಳ ಬಗ್ಗೆಯು ಹೊಂದಬೇಕು ಹಾಗ ಮಾತ್ರ ಸರಿದಾರಿಯಲ್ಲಿ ನಡೆಯುತ್ತಾರೆ ಎಂದರು.

ಮುಖ್ಯ ತರಬೇತುದಾರರಾದ ಸುರೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಿಸುಮಾರು 2 ಗಂಟೆಗೂ ಅಧಿಕ ಅವಧಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ, ಅದಕ್ಕೆ ತಕ್ಕಂತೆ ಹಂತಹಂತವಾಗಿ  ನಡೆಸಬೇಕಾದ ತಯಾರಿಯ ಬಗ್ಗೆ ಮಕ್ಕಳೊಂದಿಗೆ ಬೆರೆತು ಅತಂತ್ಯ ಸಂಭ್ರಮದಿಂದ ವಿವರಿಸಿದರು.

ಸಭೆಯಲ್ಲಿ ಝೋನಲ್ ಲೆಫ್ಟಿನೆಂಟ್ ಎಂ. ರವಿ, ಮಂಗಲ ಗಡಿಮನೆಯ ಪೀಠವರ್ಧನರಾದ ಶ್ರೀ ಮಂಜುನಾಥ್ ಸ್ವಾಮೀಜಿ, ಕಾರ್ಯದರ್ಶಿ ಪರಮೇಶ್, ನಿಕಟ ಪೂರ್ವ ಅಧ್ಯಕ್ಷ ಮಹದೇವಸ್ವಾಮಿ, ಕೆ. ಎಸ್. ಕುಮಾರ್, ಚಂದ್ರಶೇಖರ್, ಮಾಧವ ರಾವ್, ಸತ್ಯವೆಂದ್ರ, ಮುಖ್ಯ ಶಿಕ್ಷಕ ವೆಂಕಟೇಶ್ ಇತರರು ಹಾಜರಿದ್ದರು.ಡಾ. ಪ್ರಭು ನಿರೂಪಿಸಿದರು.

Leave a Reply

Your email address will not be published. Required fields are marked *