ಚಾಮರಾಜನಗರ: ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯುತ್ತಿದ್ದ ಕುಟುಂಬದ ಯಜಮಾನಿ ಮರಣ ಹೊಂದಿದ ಪ್ರಕರಣಗಳಿದ್ದರೆ ಕೂಡಲೇ ಅಂಗನವಾಡಿ ಕಾರ್ಯಕರ್ತೆಯರು ಅಥವಾ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಕುಟುಂಬದ ಮತ್ತೋರ್ವ ಮಹಿಳಾ ಫಲಾನುಭವಿಗೆ ಸೌಲಭ್ಯ ತಲುಪಿಸಲು ಅನುಕೂಲವಾಗಲಿದೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ. ಪಡೆಯುತ್ತಿದ್ದ ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದಲ್ಲಿ ಆ ಕುರಿತು ಮಾಹಿತಿ ನೀಡಬೇಕು. ಇದರಿಂದ ಕುಟುಂಬದ ಮುಂದಿನ ಮಹಿಳಾ ಮುಖ್ಯಸ್ಥರಿಗೆ ಗೃಹಲಕ್ಷ್ಮಿ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಇದರಿಂದ ಯೋಜನೆಯು ಸದ್ಬಳಕೆಯಾಗಲಿದೆ ಎಂದರು.
ಗೃಹಲಕ್ಷ್ಮಿ ಯೋಜನೆ ಅನುಕೂಲಕ್ಕಾಗಿ ಹೊಸದಾಗಿ ಅರ್ಜಿ ಹಾಕಿದವರಿಗೆ ವಿಳಂಬ ಮಾಡದೇ ಮುಂದಿನ ಹಂತಕ್ಕೆ ಅರ್ಜಿ ಕಳುಹಿಸಿ ತ್ವರಿತವಾಗಿ ಸೌಲಭ್ಯ ಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಅರ್ಜಿದಾರರು ಸಾಕಷ್ಟು ಸಮಯ ಕಾಯುವಂತಾಗಬಾರದು. ಅರ್ಹರೆಲ್ಲರಿಗು ಯೋಜನೆ ಸದುಪಯೋಗವಾಗಬೇಕು ಎಂದು ತಿಳಿಸಿದರು.
ಶಕ್ತಿ ಯೋಜನೆಯಡಿ ಯಾವುದೇ ತೊಂದರೆಯಿಲ್ಲದೆ ಬಸ್ಸುಗಳ ಕಾರ್ಯಾಚರಣೆಯಾಗಬೇಕು. ಜೂನ್ 1 ರಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸೇವೆಯಲ್ಲಿ ಯಾವುದೇ ಅಡಚಣೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಅಗತ್ಯವಿರುವ ಸಮಯದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳನ್ನು ನಿಯೋಜಿಸಬೇಕು. ಮಲೆ ಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟದಂತಹ ಸ್ಥಳಗಳಿಗೆ ಸುಸಜ್ಜಿತ ಬಸ್ಸುಗಳನ್ನು ನಿಯೋಜಿಸಬೇಕು ಎಂದು ಅಧ್ಯಕ್ಷರು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಅಗತ್ಯವಿದ್ದರೆ ಪರ್ಯಾಯ ವ್ಯವಸ್ಥೆಯ ಮೂಲಕ ಆಯಾ ನಿಗದಿತ ಅವಧಿಯೊಳಗೆ ಪಡಿತರ ನೀಡಿ. ಗೋದಾಮುಗಳಲ್ಲಿ ಗುಣಮಟ್ಟವಿಲ್ಲದ ಪಡಿತರ ಧಾನ್ಯಗಳು ಕಂಡು ಬಂದರೆ ವಾಪಸ್ಸು ಕಳುಹಿಸಿ. ಪಡಿತರ ವಿತರಣೆಯಲ್ಲಿ ಯಾವುದೇ ಲೋಪಗಳಿಗೆ ಅವಕಾಶ ನೀಡಬೇಡಿ ಎಂದು ಸೂಚಿಸಿದರು.
ಗೃಹಜ್ಯೋತಿ ಯೋಜನೆಯಡಿ ಸೌಲಭ್ಯಗಳು ಸಮರ್ಪವಾಗಿ ತಲುಪಿಸಿ. ಮಳೆಗಾಲವಾದ್ದರಿಂದ ಟ್ರಾನ್ಸ್ ಫಾರ್ಮ್‍ಗಳು ದುರಸ್ಥಿಗೆ ಬಂದಲ್ಲಿ ಕೂಡಲೇ ಸರಿಪಡಿಸಿ ವಿದ್ಯುತ್ ಪೂರೈಸಿ. ಯುವನಿಧಿ ಯೋಜನೆಯಡಿ ವ್ಯಾಪಕವಾಗಿ ಮಾಹಿತಿ ನೀಡಿ. ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ರವಿ, ಎನ್. ಸಿದ್ದರಾಜು, ಸದಸ್ಯರಾದ ಆರ್. ರಾಜೇಂದ್ರ, ಕೆ.ಬಿ. ಚಿನ್ನಸ್ವಾಮಿ, ಹೆಚ್.ಜಿ. ಉಮಾಪತಿ, ಎಂ. ರಾಚಯ್ಯ, ಹೆಚ್.ಎನ್. ಜಯರಾಜು, ಭಾಗ್ಯ, ಎಂ. ದೇವರಾಜು, ಪ್ರಭುಪ್ರಸಾದ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುರೇಶ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ವಸುಂಧರ ಹೆಗಡೆ, ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related