- ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್
ಚಾಮರಾಜನಗರ: ಪಶ್ಚಿಮಘಟ್ಟಗಳ ಸಮಗ್ರ ರಕ್ಷಣೆ ಹಾಗೂ ನಿರ್ವಹಣೆಗಾಗಿ ವಿವಿಧ ಇಲಾಖೆಗಳ ಪಾತ್ರವು ಪ್ರಮುಖವಾಗಿದ್ದು, ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಪೋಷಿಸುವಲ್ಲಿ ಎಲ್ಲರು ಕಾರ್ಯನಿರ್ವಹಿಸಬೇಕಿದೆ ಎಂದು ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪಶ್ಚಿಮಘಟ್ಟಗಳ ಸಂರಕ್ಷಣೆ, ಕಾವೇರಿ ನದಿಯ ಪರಿಸರದ ಗ್ರಾಮಗಳ ಸಮಸ್ಯೆ, ಬುಡಕಟ್ಟು ಜನಾಂಗ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಶ್ಚಿಮಘಟ್ಟ ಪ್ರದೇಶದ ಅರಣ್ಯ, ಜೀವ ವೈವಿಧ್ಯತೆ, ಜಲ ಮೂಲ, ಪರಿಸರ ರಕ್ಷಣೆಗಾಗಿ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಕಾರ್ಯ ನಿರ್ವಹಿಸುತ್ತಿದೆ. ಚಾಮರಾಜನಗರ ಜಿಲ್ಲೆಯು ಶೇ. 52ರಷ್ಟು ಅರಣ್ಯ ಪ್ರದೇಶದಿಂದ ಕೂಡಿದ್ದು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ ಹೊರತುಪಡಿಸಿದರೆ ಅತ್ಯಂತ ಹೆಚ್ಚು ಪಶ್ಚಿಮಘಟ್ಟ ಪ್ರದೇಶ ಹೊಂದಿರುವ ಜಿಲ್ಲೆ ಚಾಮರಾಜನಗರ ಆಗಿದೆ. ಇಲ್ಲಿ ಪಶ್ಚಿಮಘಟ್ಟದ ಸಂರಕ್ಷಣೆಗೆ ವಿವಿಧ ಇಲಾಖೆಗಳ ಗಮನ ಹರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರವಾಸಿ ಸ್ಥಳಗಳಲ್ಲಿ ಪರಿಸರ ಮಾಲಿನ್ಯ ವಾಗದಂತೆ ಜಾಗೃತಿ ಮೂಡಿಸಬೇಕು. ಪ್ರವಾಸಿ ಜಾಗಗಳಲ್ಲಿ ಸಮವಸ್ತ್ರ ಧರಿಸಿದ ಅಧಿಕಾರಿ ಸಿಬ್ಬಂದಿ ನಿಯೋಜಿಸಿ ಸ್ವಚ್ಚತೆ ಕಾಪಾಡಲು ಪ್ರವಾಸಿಗರಿಗೆ ಮಾರ್ಗದರ್ಶನ ತಿಳಿವಳಿಕೆ ನೀಡಬೇಕು. ಕಸ ಹಾಕುವ ಡಬ್ಬಗಳನ್ನು ಇಡಬೇಕು. ಪರಿಸರದ ಮೇಲಿನ ಕಾಳಜಿ ಉಂಟು ಮಾಡಬೇಕು ಎಂದರು.
ಪ್ರವಾಸಿ ತಾಣಗಳಲ್ಲಿ ಪಶ್ಚಿಮಘಟ್ಟಗಳ ಸಂರಕ್ಷಣೆ ಹಾಗೂ ಮಹತ್ವ ವಿವರಿಸುವ ಗೋಡೆ, ಇನ್ನಿತರ ಫಲಕಗಳನ್ನು ಆಕರ್ಷಕವಾಗಿ ನಿರ್ಮಿಸಬೇಕು. ಪರಿಸರ ಜಾಗೃತಿ ಮೂಡಿಸುವ ವಿವರಗಳು ಇರಬೇಕು. ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಪಶ್ಚಿಮಘಟ್ಟಗಳ ಬಗೆಗೆ ತಿಳಿಸಿಕೊಡುವ ಕಾರ್ಯಕ್ಕೆ ಮುಂದಾಗುವಂತೆ ಸೂಚಿಸಿದರು.
ಪ್ಲಾಸ್ಟಿಕ್ ನಿಯಂತ್ರಣÀ ಕಟ್ಟುನಿಟ್ಟಾಗಿ ಆಗಬೇಕು. ಹಸಿರು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯ ಭಾಗದ ಪ್ರದೇಶಗಳಿಗೆ ಕೊಂಡೊಯ್ಯದಂತೆ ತಿಳಿಸಬೇಕು. ಎರಡು ಲೀಟರ್ ನೀರಿನ ಪ್ಲಾಸ್ಟಿಕ್ ಬಾಟಲಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಬಾರದು. ಇಂತಹ ಹಲವು ಕ್ರಮಗಳ ಮೂಲಕ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಕಬೇಕೆಂದು ಅಧ್ಯಕ್ಷರು ತಿಳಿಸಿದರು.
ಅರಣ್ಯ ಭಾಗದಲ್ಲಿ ವಾಸಿಸುವ ಬುಡಕಟ್ಟು ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಸಾಮಾಜಿಕ ಅರಣ್ಯ ಇಲಾಖೆ ಹೆಚ್ಚು ಗಿಡಗಳನ್ನು ನೆಡುವುದರೊಂದಿಗೆ ಪೋಷಣೆ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಸಂರಕ್ಷಣೆಗಾಗಿ ಇಲಾಖೆಗಳು ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಅರಣ್ಯ ಪ್ರದೇಶದ ವಾಸಿಗಳ ಆರೋಗ್ಯ ತಪಾಸಣೆಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕ್ಯಾನ್ಸರ್ ತಪಾಸಣೆ, ಮುಂದಿನ ಚಿಕಿತ್ಸೆಗಾಗಿ ವಿವಿಧೆಡೆ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ, ಪರಿಸರ ಸಂರಕ್ಷಣೆ ಇನ್ನಿತರ ಪ್ರಮುಖ ವಿಷಯಗಳಿಗೆ ಆದ್ಯ ಗಮನ ಕೊಡಲಾಗುತ್ತಿದೆ ಎಂದರು.
ಉಚ್ಚ ನ್ಯಾಯಾಲಯದ ಸೀನಿಯರ್ ಕೌನ್ಸಿಲರ್ ಮೃತ್ಯಂಜಯ, ಹಿರಿಯ ವಿಜ್ಞಾನಿ ನಯೀಮ್ ಉಲ್ಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಶ್ರೀಪತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪಾಟಿಲ್, ತಹಶೀಲ್ದಾರ್ ಚೈತ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೆಶಕರಾದ ರಾಜೇಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ತಮಣ್ಣಗೌಡ ಪಾಟಿಲ್, ಇನ್ನಿತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related