ಮಸಣಾಪುರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ : ಕಿಡಿಗೇಡಿ ಗಡಿಪಾರಿಗೆ ಆಗ್ರಹಿಸಿ ಸಿಎಂಗೆ ಮನವಿ

ಚಾಮರಾಜನಗರ :  ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಇತ್ತೀಚೆಗೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಕಿಡಿಗೇಡಿಗಳ ವಿರುದ್ಧ ಗುಂಡಾ ಕಾಯ್ದೆ, ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಅಪಮಾನ ಮಾಡುವ ವ ಕೃತ್ಯಗಳು ಹೆಚ್ಚಾಗಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅಪಮಾನವಾದ ಸಂದರ್ಭದಲ್ಲಿ ಇಡೀ ದಲಿತ ಸಮಾಜ ಬೀದಿಗಳಿಂದ  ಪ್ರತಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಎಚ್ಚೆತ್ತುಗೊಳ್ಳುವ ಸಂಬಂಧಪಟ್ಟ ಇಲಾಖೆಗಳು ಪ್ರತಿಭಟನೆಗಳಿಂದಲೂ ಪ್ರತಿರೋಧಗಳಿಂದಲೋ ಒತ್ತಡಗಳಿಂದಲೋ ಆರೋಪಿಯನ್ನು ಪತ್ತೆಹಚ್ಚಿ ನಾಮಕಾವಸ್ತೆಗೆ ಪ್ರಕರಣ ದಾಖಲಿಸಿ ಬಿಡುತ್ತಾರೆ. ಆರೋಪಿಗೆ ಒಂದೆರಡು ದಿನಗಳಲ್ಲಿ ಜಾಮೀನು ದೊರೆತು ರಾಜಾರೋಷವಾಗಿ ತಿರುಗಾಡುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಓರ್ವ ರಾಷ್ಟ್ರನಾಯಕನಿಗೆ ಅಪಮಾನ ಮಾಡಿದರೆ ಏನು ಆಗುವುದಿಲ್ಲ. ಎಂಬ ಭಾವನೆ ಬಂದು ಅಪಮಾನದ ಕೃತ್ಯಗಳು ಹೆಚ್ಚಾಗುತ್ತಿವೆ.
ಡಾ. ಬಿ.ಆರ್. ಅಂಬೇಡ್ಕರ್ ರವರು ಭಾರತದ ಸಮಸ್ತ ಶೋಷಿತ-ಹಿಂದುಳಿದವರ ಪರವಾಗಿ ತನ್ನ ಜೀವನವಿಡೀ ಹೋರಾಡಿ ಎಲ್ಲಾ ಹಿಂದುಳಿದವರಿಗೆ ಮತ್ತು ಅಧಿಕಾರಗಳನ್ನು ತಂದುಕೊಟ್ಟಂತಹ ರಾಷ್ಟ್ರನಾಯಕರು. ಆದರೆ, ಇತ್ತೀಚಿನ ದಿನಗಳಲ್ಲಿ ಹಿಂದುಳಿದ ವರ್ಗಗಳವರಿಂದಲೇ ಹೆಚ್ಚು  ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನಗಳಾಗುತ್ತಿರುವುದು ಶೋಷನೀಯ ಸಂಗತಿ.
ಮೈಸೂರು ಜಿಲ್ಲೆ ಮತ್ತು ತಾಲ್ಲೂಕು ವಾಜಮಂಗಲ ಘಟನೆಗಳನ್ನು ಗಮನಿಸಿದರೆ ನಮ್ಮನ್ನು ಆಳುವ ಸರ್ಕಾರದ ಬೇಜವಾಬ್ದಾರಿಗಳು ಎದ್ದು ಕಾಣುತ್ತವೆ. ಡಾ. ಬಿ.ಆರ್. ಅಂಬೇಡ್ಕರ್ ರವರು ರಾಷ್ಟ್ರನಾಯಕರು ರಾಷ್ಟ್ರನಾಯಕರಿಗೆ ಮಾಡಿದ ಅಪಮಾನ ಈ ರಾಷ್ಟ್ರಕ್ಕೆ ಮಾಡಿದ ದ್ರೋಹವಾಗಿದೆ. ಆದುದ್ದರಿಂದ ಡಾ. ಬಿ.ಆ‌ರ್. ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಗುಂಡಾ ಕಾಯ್ದೆ ಮತ್ತು ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಬಂಧಿಸುವುದಲ್ಲದೇ ಅವರುಗಳನ್ನು ಈ ರಾಜ್ಯದಿಂದಲೇ ಶಾಶ್ವತ ಗಡಿಪಾರು ಮಾಡಬೇಕು ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ.ಸಿದ್ದರಾಜು ದೊಡ್ಡಿಂದುವಾಡಿ, ಜಿಲ್ಲಾ ಸಂಚಾಲಕ ರಾದ ಮಾಂಬಳ್ಳಿ ಇಂಡಯ್ಯ, ಮಹಾದೇವಸ್ವಾಮಿ, ಕಿಲಗೆರೆ ಶಿವಣ್ಣ, ರಾಜಣ್ಣ ತೆಳ್ಳನೂರು, ನಾಗರಾಜು, ಯಳಂದೂರು ತಾಲೂಕು ಸಂಚಾಲಕ
ರಾಚಪ್ಪ,  ಹನೂರು ತಾಲೂಕಿನ ಸಂಘಟನಾ ಸಂಚಾಲಕ ಪಿ.ಜಿ.ಪಾಳ್ಯ ವೀರಪ್ಪ,  ಕೊಳ್ಳೇಗಾಲ ತಾಲ್ಲೂಕು ಸಂಘಟನಾ ಸಂಚಾಲಕಿ  ಶಿವಮ್ಮ,   ಹನೂರು ತಾಲೂಕು  ಸಂಘಟನಾ ಸಂಚಾಲಕ ಮರಿಯಮ್ಮ ಕೊಳ್ಳೇಗಾಲ ತಾಲ್ಲೂಕು ಸಂಘಟನಾ ಸಂಚಾಲಕ ಸಿಂಗನಲ್ಲೂರು ದೇವರಾಜು ಹಾಜರಿದ್ದರು.

Leave a Reply

Your email address will not be published. Required fields are marked *