ಚಾಮರಾಜನಗರ: ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಕುಳ್ಳೂರು ಗ್ರಾಮದಿಂದ ಬೂದಿಪಡಗಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ಸೇತುವೆ ಕಾಮಗಾರಿಗೆ ಪಶು ಸಂಗೋಪನೆ,ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಇಂದು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರಾದ ಪುಟ್ಟರಂಗಶೆಟ್ಟಿ ಅವರು ರಾಷ್ಟ್ರೀಯ ಹೆದ್ದಾರಿಯಿಂದ ಬೂದಿಪಡಗ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಸೇತುವೆ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಗ್ರಾಮಸ್ಥರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ 5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹೊಸ ಸೇತುವೆ ನಿರ್ಮಾಣದಿಂದ ಬೂದಿಪಡಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಣಿನಾಯಕ್, ತಾ.ಪಂ ಮಾಜಿ ಸದಸ್ಯ ಪಿ.ಕುಮಾರ್ ನಾಯಕ್, ಮಾಜಿ ಗ್ರಾ.ಪಂ.ಅಧ್ಯಕ್ಷೆ ಶಾಂತಮ್ಮ, ಮಾಜಿ ಉಪಾಧ್ಯಕ್ಷ ಶಿವನಾಯಕ, ಮುಖಂಡರಾದ ಬಾಲು ನಾಯಕ, ಉಲ್ಲಾಶ್, ನಾಯಕ್, ಸಣ್ಣಾಕ್ಕಿಗೌಡ, ಶಂಕರ್, ಬಾಬು, ಶಿವಣ್ಣ, ಮಹದೇವನಾಯಕ ಸೇರಿದಂತೆ ಇತರರು ಇದ್ದರು.