ಚಾಮರಾಜನಗರ .ಅ.2(ಕರ್ನಾಟಕ ವಾರ್ತೆ) ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಯೋಜನೆಯಡಿ 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಮಾಜಿ ಸಚಿವರು ಹಾಗೂ ಶಾಸಕರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಗುದ್ದಲಿಪೂಜೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗಶೆಟ್ಟಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 50 ಲಕ್ಷ ಅನುದಾನ ನೀಡಲಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಮುದಾಯ ಭವನಗಳ ಕಾಮಗಾರಿಗಳು ನಿರ್ಮಾಣ ಹಂತದಲ್ಲಿದ್ದು, ಅವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದರು.
ಕಾಮಗಾರಿಗಳನ್ನು ನಿಗದಿತ ಅವದಿಯೊಳಗೆ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಗಂಗಾ ಕಲ್ಯಾಣ, ವಸತಿ ಸಾಲ ಸೇರಿದಂತೆ ಹಲವು ಯೋಜನೆಗಳ ಸೌಲಭ್ಯಗಳನ್ನು ಒದಗಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಮಾಜಿ ಸಚಿವರು ಹಾಗೂ ಶಾಸಕರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ಗಾಂಧಿ ಜಯಂತಿಯ ದಿನದಂದು ಅಂಬೇಡ್ಕರ್ ಭವನದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿರುವುದು ಸಂತಸ ತಂದಿದೆ. ಚಾಮರಾಜನಗರ ಜಿಲ್ಲೆ ಅಭಿವೃದ್ಧಿಯತ್ತ ಸಾಗುತ್ತಿದೆ. ತಾವು ಸಚಿವರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗಿದೆ.
ಗ್ರಾಮದ ಜನರು ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದಾಗ ಮತ್ತಷ್ಟು ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯೋಗೇಶ್, ಲಿಂಗಣ್ಣ, ನಾಗರಾಜುಮೂರ್ತಿ, ಶಿವಕುಮಾರಸ್ವಾಮಿ, ಎಂ.ಎಸ್.ಮಾದಯ್ಯ, ಎಸ್.ಪಿ.ಕೆ.ಉಮೇಶ್, ಮಹೇಶ್ ಕುದರ್, ಚಿಕ್ಕ ಮಹದೇವ್, ಕಾವೇರಿ ಶಿವಕುಮಾರ್, ಅಶೋಕ್, ಚಿನ್ನಮ್ಮ, ನಾಗರತ್ನ, ಮರಿಯಾಲ ಹುಂಡಿ ಕುಮಾರ್, ದುಂಡು ಮಾದಯ್ಯ, ಬಸುಮರಿ ಸೇರಿದಂತೆ ಗ್ರಾಮದ ಮುಖಂಡರು, ಯಜಮಾನರು ಉಪಸ್ಥಿತರಿದ್ದರು.