ಚಾಮರಾಜನಗರ: ಸುಸ್ಥಿರ ಸಮಾಜ ನಿರ್ಮಾಣ ಹಾಗೂ ದೇಶದ ಪ್ರಗತಿಗಾಗಿ ಪ್ರತಿಯೊಬ್ಬರು ನವಸಾಕ್ಷರರಾಗುವಂತೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹಾಗೂ ಡಯಟ್ ಪ್ರಾಂಶುಪಾಲರಾದ ಆರ್. ಲಿಂಗರಾಜು ಅವರು ಸಲಹೆ ಮಾಡಿದರು.
ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವೇದಿಕೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶಾದ್ಯಂತ 60ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅನಕ್ಷರಸ್ಥರನ್ನು ನವ ಸಾಕ್ಷರರನ್ನಾಗಿ ರೂಪಿಸುವುದೇ ಸಾಕ್ಷರತಾ ದಿನದ ಪ್ರಮುಖ ಉದ್ದೇಶವಾಗಿದೆ. ಅಕ್ಷರಭ್ಯಾಸ ಕಲಿತವರು ವ್ಯವಹಾರ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಅನಕ್ಷರಸ್ಥರನ್ನು ಮೌಢ್ಯತೆ ಕಾಡಲಿದೆ. ಸಾಮಾಜಿಕ ಅಸಮತೋಲನ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಅನಕ್ಷರಸ್ಥರಾಗಿರುವ ಪ್ರತಿಯೊಬ್ಬರು ಅಕ್ಷರ ಕಲಿತು ಸಾಕ್ಷರರಾಗಲು ಮುಂದಾಗಬೇಕು. ಅಕ್ಷರ ಕಲಿಕೆ ಭವಿಷ್ಯದ ಸುಸ್ಥಿರ ಜೀವನ ಕಟ್ಟಿಕೊಳ್ಳಲು ನೆರವಾಗಲಿದೆ ಎಂದರು.
ನಾಗವಳ್ಳಿಯ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 127 ವರ್ಷಗಳ ಇತಿಹಾಸವಿದ್ದು, ಶೈಕ್ಷಣಿಕ ವ್ಯವಸ್ಥೆಗೆ ಪೂರಕ ವಾತಾವರಣವಿದೆ. 2025-26ನೇ ಸಾಲಿನ ಲಿಂಕ್ ಡಾಕುಮೆಂಟ್ ಕಾರ್ಯಕ್ರಮದಡಿ ಚಾಮರಾಜನಗರ ತಾಲೂಕಿನ ನಾಗವಳ್ಳಿ 1250 ಹಾಗೂ ಹನೂರು ತಾಲೂಕಿನ ಅಜ್ಜೀಪುರ ಗ್ರಾಮದ 1250 ಸೇರಿದಂತೆ 2500 ಮಂದಿ ಪೈಕಿ 2448 ಅನಕ್ಷರಸ್ಥರನ್ನು ನವಸಾಕ್ಷರರÀನ್ನಾಗಿ ಮಾಡುವ ನಿಗದಿತ ಗುರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಸಾಕ್ಷರತೆಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಆರ್. ಲಿಂಗರಾಜು ಅವರು ತಿಳಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶಿವಕುಮಾರ್ ಅವರು ಮಾತನಾಡಿ ಅನಕ್ಷರಸ್ಥರನ್ನು ಅಕ್ಷರ ಕಲಿಯುವ ಅರಿವು ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 8ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ನವಭಾರತ ಸಾಕ್ಷರತಾ ಕಾರ್ಯಕ್ರಮದಡಿಯಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಅನಕ್ಷರಸ್ಥರನ್ನು ನವಸಾಕ್ಷರರನ್ನಾಗಿ ಮಾಡಲಾಗುತ್ತಿದೆ. ಅಕ್ಷರದ ಮಹತ್ವವನ್ನು ಎಲ್ಲರೂ ಅರಿಯಬೇಕು. ತಾವು ಕಲಿತು ತಮ್ಮ ಸುತ್ತಲಿನ ಜನರಿಗೂ ಅಕ್ಷರ ಕಲಿಸಲು ಮುಂದಾಗಬೇಕು ಎಂದು ತಿಳಿಸಿದರು.
ಡಯಟ್ ಸಂಸ್ಥೆಯ ಉಪನ್ಯಾಸಕರಾದ ನಾಗರಾಜು ಅವರು ಮಾತನಾಡಿ ಅನಕ್ಷರತೆ ಮಹಾಪಾಪ, ಅನಕ್ಷರತೆಯನ್ನು ನಿರ್ಮೂಲನೆ ಮಾಡದ ಹೊರತು ದೇಶಕ್ಕೆ ಭವಿಷ್ಯವಿಲ್ಲ. 2011ರ ಜನಗಣತಿ ಪ್ರಕಾರ ದೇಶದಲ್ಲಿ ಸಾಕ್ಷರರ ಸಂಖ್ಯೆ ಶೇ. 61 ರಷ್ಟು ಮಾತ್ರ. ಸಾಕ್ಷರತೆಯನ್ನು ಹೆಚ್ಚಿಸುವ ಸಲುವಾಗಿ ನವಸಾಕ್ಷರ ಕಾರ್ಯಕ್ರಮ ನಿರ್ವಹಣೆಗೆ ಲಿಂಕ್ ಡಾಕುಮೆಂಟ್ ಕಾರ್ಯಕ್ರಮದಡಿ ಅನುದಾನ ನೀಡಿ ಅನಕ್ಷರಸ್ಥರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ. ಅಕ್ಷರಸ್ಥರಿಗೆ ಕಲಿಸುವ ಬೋಧಕರು ಸೇವಾ ಮನೋಭಾವನೆಯಿಂದ ಕೆಲಸ ಮಾಡುವಂತೆ ಸಲಹೆ ಮಾಡಿದರು.
ನಾಗವಳ್ಳಿ ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶಾಂತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಯಟ್ ಉಪನ್ಯಾಸಕರಾದ ಮಂಜುಳ, ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಸುರೇಶ್‍ಕುಮಾರ್, ಶಿಕ್ಷಣ ಇಲಾಖೆಯ ಸಿ.ಆರ್.ಪಿ ಗಳಾದ ಸೋಮಣ್ಣ, ಶಿವಮೂರ್ತಿ, ಪುಟ್ಟು, ಶಾರದ, ಬಿ.ಐ.ಇ.ಆರ್.ಟಿ ರೆಬೆಲೋ, ಸಾಕ್ಷರತಾ ಕಾರ್ಯಕ್ರಮ ನಿರ್ವಾಹಕರಾದ ಶೋಭಾ ರಾಥೋಡ್, ಶಾಲಾ ಶಿಕ್ಷಕರಾದ ರಾಜಮ್ಮ, ಜಯಮ್ಮ, ಶಾಲಾ ಎಸ್.ಡಿ.ಎಂ.ಸಿ. ಸದಸ್ಯರಾದ ಸುಮಯಾ ಬಾನು, ಮುಖಂಡರಾದ ಅಸ್ಲಂ ಪಾಶ, ದೇವಮ್ಮ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.