ಮಂಡ್ಯ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಕೊಲೆ ಮಾಡಿದ್ದ ಅಪರಾಧಿಗೆ ಮಂಡ್ಯ ಅಧಿಕ ಸತ್ರ 2ನೇ ವಿಶೇಷ ಶೀಘ್ರಗತಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಬಿ.ದಿಲೀಪ್‌ಕುಮಾರ್ ತೀರ್ಪು ನೀಡಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರದ ಪ್ರಕಾಶ್ ಶಿಕ್ಷೆಗೊಳಗಾದ ವ್ಯಕ್ತಿ. ಈತ 13 ವರ್ಷದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಹಣ ಕೊಡುತ್ತೇನೆಂದು ಪುಸಲಾಯಿಸಿ 2015ರ ಏ.27ರಂದು ಕೆ.ಆರ್.ಪೇಟೆ ಟೌನ್‌ನ ನಾಗಮಂಗಲ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲಾ ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಾಲಕಿಯು ಈ ವಿಚಾರವನ್ನು ತನ್ನ ತಂದೆ ತಾಯಿಗೆ ತಿಳಿಸುತ್ತೇನೆಂದು ಹೇಳಿದಾಗ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯನ್ನು ಲೈಂಗಿಕ ದೌರ್ಜನ್ಯ, ಕೊಲೆ ಹಾಗೂ ಪೋಕ್ಸೋ ಕಾಯ್ದೆಯ ಪ್ರಕರಣ ದಾಖಲಾಗಿತ್ತು. ಈ ಸಂದರ್ಭ ತನಿಖಾಧಿಕಾರಿಯಾಗಿದ್ದ ಕೆ.ಆರ್.ಪೇಟೆ ಸರ್ಕಲ್ ಇನ್ಸ್ಪೆಕ್ಟರ್ ರಾಜೇಂದ್ರ ಭಾಗಶಃ ತನಿಖೆ ಕೈಗೊಂಡಿದ್ದರು. ಇವರ ವರ್ಗಾವಣೆ ಬಳಿಕ ಇನ್ಸ್ಪೆಕ್ಟರ್ ಡಿ.ಯೋಗೇಶ್ ತನಿಖೆ ಕಾರ್ಯ ಪೂರ್ಣಗೊಳಿಸಿ ಪ್ರಕಾಶ್ ವಿರುದ್ದ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆಯಲ್ಲಿ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಬಿ.ದಿಲೀಪ್‌ಕುಮಾರ್ ಅವರು ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಕಾಲತ್ತು ವಹಿಸಿದ್ದರು.
