ಹನೂರು: ಗೌರಿ-ಗಣೇಶ ಹಬ್ಬದಲ್ಲಿ ಡಿಜೆಗೆ ಅವಕಾಶವಿಲ್ಲ – ಉಲ್ಲಂಘಿಸಿದರೆ ಕಠಿಣ ಕ್ರಮ

ಹನೂರು:- ಮುಂಬರುವ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹನೂರು ತಾಲೂಕಿನಾದ್ಯಂತ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿ ಡಿಜೆ ಬಳಸಿದರೆ ಅಥವಾ ಬಾಡಿಗೆ ನೀಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಆನಂದಮೂರ್ತಿ ಖಡಕ್ ಎಚ್ಚರಿಕೆ ನೀಡಿದರು.

ಹನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸೌಂಡ್ ಸಿಸ್ಟಮ್ ಮತ್ತು ಡಿಜೆ ಮಾಲೀಕರ ಸಭೆ ಕರೆದು ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಮತ್ತು ಕರ್ನಾಟಕ ಸರ್ಕಾರದ ನಿರ್ದೇಶನದಂತೆ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಬಳಕೆಗೆ ನಿಷೇಧವಿದೆ. ಹಬ್ಬವನ್ನು ಪರಿಸರ ಸ್ನೇಹಿ ಮತ್ತು ಶಬ್ದ ಮಾಲಿನ್ಯ ರಹಿತವಾಗಿ ಆಚರಿಸಬೇಕು ಎಂದು ಸೂಚಿಸಿದರು.

ಗಣೇಶ ಮಂಟಪಗಳಲ್ಲಿ ಡಿಜೆ ಬದಲು ಸಾಮಾನ್ಯ ಬಾಕ್ಸ್ ಸ್ಪೀಕರ್‌ಗಳನ್ನು ಮಾತ್ರ ಬಳಸಬೇಕು ಮತ್ತು ಧ್ವನಿವರ್ಧಕಗಳ ಬಳಕೆಗೆ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಅವರು ತಿಳಿಸಿದರು. ರಾತ್ರಿ 10 ಗಂಟೆಯ ನಂತರ ಯಾವುದೇ ಕಾರಣಕ್ಕೂ ಮೈಕ್ ಮತ್ತು ಸೌಂಡ್ ಸಿಸ್ಟಮ್ ಬಳಕೆ ಮಾಡುವಂತಿಲ್ಲ ಹಾಗೂ ನಿಗದಿತ ಡೆಸಿಬಲ್ ಮಿತಿಗಿಂತ ಹೆಚ್ಚು ಶಬ್ದ ಮಾಡುವಂತಿಲ್ಲ ಎಂದು ನಿಯಮಗಳನ್ನು ವಿವರಿಸಿದರು.

ಗಣಪತಿ ಆಯೋಜಕರು ಹೆಚ್ಚು ಹಣ ನೀಡುತ್ತಾರೆ ಎಂಬ ಕಾರಣಕ್ಕೆ ಡಿಜೆ ಸಿಸ್ಟಮ್ ನೀಡಿದರೆ, ಸೌಂಡ್ ಮಾಲೀಕರ ವಿರುದ್ಧವೇ ಮೊದಲು ಕ್ರಮ ಕೈಗೊಳ್ಳಲಾಗುವುದು. ಸ್ಥಳದಲ್ಲಿಯೇ ಡಿಜೆ ವಾಹನ ಮತ್ತು ಸೌಂಡ್ ಬಾಕ್ಸ್‌ಗಳನ್ನು ವಶಕ್ಕೆ ಪಡೆದು, ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಸೌಂಡ್ ಸಿಸ್ಟಮ್ ಮಾಲೀಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *