
ಚಾಮರಾಜನಗರ: ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬ ವರ್ಗದವರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಇಂದು ನಗರದ ಪೊಲೀಸ್ ಭವನದಲ್ಲಿ ಆಯೋಜಿಸಲಾಗಿತ್ತು.
ಮೈಸೂರಿನ ಪ್ರಸಿದ್ದ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್ ಸಹಯೋಗದಲ್ಲಿ ನಡೆದ ಕಣ್ಣಿನ ತಪಾಸಣಾ ಶಿಬಿರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ ಅವರು ಸ್ವತಹ ಕಣ್ಣಿನ ತಪಾಸಣೆಗೆ ಒಳಗಾಗುವ ಮೂಲಕ ಚಾಲನೆ ದೊರೆಯಿತು.
ಶಿಬಿರದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬದ 300ಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆಗೊಳಪಟ್ಟು ಶಿಬಿರವನ್ನು ಯಶಸ್ವಿಗೊಳಿಸಿದರು.
ಚಾಮರಾಜನಗರ ಪೊಲೀಸ್ ಉಪಾಧೀಕ್ಷಕರಾದ ಎನ್. ಸ್ನೇಹರಾಜ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರಕ್ಷಕ ಉಪಾಧೀಕ್ಷಕರಾದ ಜಿ. ಸೋಮಣ್ಣ ಹಾಗೂ ಇನ್ನಿತರ ಅಧಿಕಾರಿ, ಸಿಬ್ಬಂದಿ ಇದೇ ಸಂದರ್ಭದಲ್ಲಿ ಹಾಜರಿದ್ದರು.