ಸುಗಮ ಸಂಗೀತದಿಂದ ಮನಸ್ಸಿಗೆ ಉಲ್ಲಾಸ : ಬಿ.ಬಸವರಾಜು

  • ಗಡಿನಾಡ ಸುಗಮ ಸಂಗೀತೋತ್ಸವದ ತರಬೇತಿ ಕಾರ್ಯಗಾರ

ಚಾಮರಾಜನಗರ: ಸಾಂಸ್ಕೃತಿಕ  ಕಲೆಗಳು ಬೆಳೆಯಲು ಕಲಿಯುವವರಿಗೆ ಕಲಿಯಲೇ ಬೇಕೆಂಬ  ಹಠವಿರಬೇಕು,  ಕಲಿಸುವವರಿಗೆ ಕಲಿಸುವ ಹಂಬಲವಿರಬೇಕು ಆಗದಾಗ ಮಾತ್ರ
ಹೊಸ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಚಾಮರಾಜನಗರ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ ಬಸವರಾಜ  ಅಭಿಪ್ರಾಯಪಟ್ಟರು.
       ನಗರದ ರೋಟರಿ ಭವನದಲ್ಲಿ ಸ್ವರ ಸಿಂಚನ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೋಟರಿ ಸಂಸ್ಥೆ ವತಿಯಿಂದ ನಡೆದ  ಗಡಿನಾಡ ಸುಗಮ ಸಂಗೀತೋತ್ಸವದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
  ಸುಗಮ ಸಂಗೀತವು ಕವಿಯ ಆಶಯವನ್ನು ಅರಿತು ಭಾವ ತುಂಬಿ ಸಂಗೀತ ಸಂಯೋಜಿಸಿ ಹಾಡುವ ಪ್ರಕ್ರಿಯೆಯಾಗಿದೆ, ಮೈಸೂರು ಪಿ.ಕಾಳಿಂಗರಾವ್ ಅ
ವರನ್ನು ಸುಗಮ ಸಂಗೀತದ ಪ್ರವರ್ತಕ ಎಂದು ಕರೆಯುತ್ತಾರೆ ಇವರಂತೆ ಅನೇಕ ಕವಿಗಳು ಗಾಯಕರು ಈ ಕ್ಷೇತ್ರವನ್ನು  ಬೆಳೆಸಿದ್ದಾರೆ, ಇತ್ತೀಚೆಗೆ ಕೆಲವು ರೋಗಗಳನ್ನು ಗುಣಪಡಿಸಲು ಇದೊಂದು ಚಿಕಿತ್ಸಾ ವಿಧಾನವಾಗಿ ಬಳಕೆ ಆಗುತ್ತಿದೆ, ಆದರೆ ಇತ್ತೀಚಿನ ದಿನಮಾನಗಳಲ್ಲಿ ಕಲಿಯುವವರ ಸಂಖ್ಯೆ ಕ್ಷೀಣಿಸುತ್ತಿರುವುದಯ ವಿಷಾಧಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
           ರಂಗ ದೀವಿಗೆ ಸಂಸ್ಥೆಯ ಅಧ್ಯಕ್ಷ ಕಲೆ ನಟರಾಜು ಮಾತನಾಡಿ,  20ನೇ ಶತಮಾನದಲ್ಲಿ ಲಘು ಸಂಗೀತವಾಗಿ ಹುಟ್ಟಿಕೊಂಡ ಈ ಕಲೆ ಸುಗಮ ಸಂಗೀತವಾಗಿ ಹೆಮ್ಮರವಾಗಿ ಬೆಳೆಯಲು ನಾಡಿನ ಅನೇಕ ಕವಿಗಳು ಸಾಹಿತಿಗಳು ಶ್ರಮಿಸಿದ್ದಾರೆ. ಸುಗಮ ಸಂಗೀತ ಸಾಹಿತ್ಯ ಮತ್ತು ಸಂಗೀತದ ಅನುಪಮ ಅನುಬಂಧ ವಾಗಿದೆ, ಇದು ಹುಟ್ಟುವುದು ಕವಿಯ ದರ್ಶನದಿಂದ ಕವಿತೆಯ ಅರ್ಥ ಕೆಡದಂತೆ ಪದಗಳ ಭಾವವನ್ನು ಅರ್ಥಪೂರ್ಣವಾಗಿ ಹೃದಯಕ್ಕೆ ಮುಟ್ಟಿಸುವ ಪ್ರಸರಣವಾಗಿದೆ. ಸುಗಮ ಎಂದರೆ ಸರಳವಾದುದು ಎಂದಾದರೆ, ‘ಸು’ ಎಂದರೆ ಒಳ್ಳೆಯದು,ಗಮ ಎಂದರೆ ಪರಿಮಳ,  ‘ಗ’ ತೆಗೆದರೆ ಸುಮಾ ಹೂವಾಗುತ್ತದೆ. ಸರಳವಾದ ಒಳ್ಳೆಯ ಪರಿಮಳ ಬೀರುವ ಹೂವು ಈ ಸುಗಮ ಸಂಗೀತವಾಗಿದೆ ಎಂದರು.
      ಕವಿ ಕೆಸ್ತೂರು ಮಂಜುನಾಥ್  ಮಾತನಾಡಿ, ಸುಗಮ ಸಂಗೀತದಲ್ಲಿ ಸಾಹಿತ್ಯವೇ ಪ್ರಧಾನವಾದುದು, ಕವಿ ತನ್ನೊಳಗಿನ ಬೆಳಕನ್ನು ಕವಿತೆಯಾಗಿಸಿದರೆ, ಅದಕ್ಕೆ ರಾಗ ಸಂಯೋಜಿಸಿ ಭಾವ ತುಂಬಿ ಗಾಯಕ ಹಾಡಿದಾಗ ಮಾತ್ರ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
           ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್, ಅಂತರಾಷ್ಟ್ರೀಯ ಗಾಯಕ ಸಿಎಂ ನರಸಿಂಹಮೂರ್ತಿ, ರೋಟರಿ ಕಾರ್ಯದರ್ಶಿ ಅಂಕಶೆಟ್ಟಿ, ಮಾಜಿ ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ಗಾಯಕರಾದ  ಲತಾ ಪುಟ್ಟಸ್ವಾಮಿ, ನಾಗಮ್ಮ, ಗಾಯಕ ಜೆ ಬಿ ರಾಜೇಶ್,  ಶಿಕ್ಷಕ ಕುಮಾರ್ , ಸಂಸ್ಥೆಯ ಅಧ್ಯಕ್ಷ ಕೆ ಬಿ ಮಹೇಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *