ಬಸವಮಾರ್ಗದಿಂದ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ

  • ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಶ್ರಮಜೀವಿ ಕುಟುಂಬಗಳಿಗೆ ನೆರವಿನ ಹಸ್ತ

ಮೈಸೂರು : ಗೌರಿ–ಗಣೇಶ ಹಬ್ಬದ ಪ್ರಯುಕ್ತ ಆಟೋ ಚಾಲಕರೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವ ಉದ್ದೇಶದಿಂದ ನಗರದ ಹೆಬ್ಬಾಳದಲ್ಲಿ‌ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸೋಮವಾರ ಸಂಜೆ‌ ಬಾಡಿಗೆ ಆಟೋ ಚಾಲಕರಿಗೆ ದಿನಸಿ ಕಿಟ್‌ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವಮಾರ್ಗ ಫೌಂಡೇಶನ್‌ನ ಸಂಸ್ಥಾಪಕ ಎಸ್. ಬಸವರಾಜು, ಆಟೋ ಚಾಲಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ, ಗೌರಿ–ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಟೋ ಚಾಲಕರು ಕೇವಲ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ವರಲ್ಲ. ಅವರು ನಗರದ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತುರ್ತು ಸಮಯದಲ್ಲಿ ನೆರವಾಗುವ ಆಟೋ ಚಾಲಕರ ಸೇವೆ ಶ್ಲಾಘನೀಯ. ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಪರಸ್ಪರ ಪ್ರೀತಿ, ಸಹಕಾರ, ಮಾನವೀಯತೆ ಮತ್ತು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುವ ಸಂದರ್ಭಗಳಾಗಬೇಕು. ಸಮಾಜದಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬರ ಶ್ರಮವನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದೇ ಆಶಯದಿಂದ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಬಾಡಿಗೆ ಆಟೋ ಚಾಲಕರು ಪ್ರತಿದಿನ ಹಲವು ಸವಾಲುಗಳನ್ನು ಎದುರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಂಧನದ ಬೆಲೆ, ವಾಹನ ನಿರ್ವಹಣೆ, ಕುಟುಂಬದ ಜವಾಬ್ದಾರಿ ಸೇರಿದಂತೆ ಹಲವು ಒತ್ತಡಗಳ ನಡುವೆಯೂ ಅವರು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪರಿಶ್ರಮವನ್ನು ಗುರುತಿಸಿ, ಹಬ್ಬದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ದಿನಸಿ ಕಿಟ್ ನೀಡಲಾಗುತ್ತಿದೆ. ಆಟೋ ಚಾಲಕರ ಶ್ರಮಕ್ಕೆ ಗೌರವ – ಅವರ ಕುಟುಂಬದ ಸಂತೋಷಕ್ಕೆ ನಮ್ಮ ಕಾಳಜಿ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಅಗತ್ಯವಿರುವ ಸಂದರ್ಭದಲ್ಲಿ ಶ್ರಮಜೀವಿಗಳು ಮತ್ತು ಸಮಾಜದ ವಿವಿಧ ವರ್ಗಗಳಿಗೆ ನೆರವಾಗುವಂತಹ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಟೋ ಚಾಲಕರು, ಬಸವಮಾರ್ಗ ಫೌಂಡೇಶನ್‌ನ ಸಿಬ್ಬಂದಿ, ಕಾರ್ಯಕರ್ತರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಬಾಡಿಗೆ ಆಟೋ ಚಾಲಕರಿಗೆ ನೂತನ ಆಟೋ ನೀಡುವ ಉದ್ದೇಶ

ಬಾಡಿಗೆ ಆಟೋ ಚಾಲಕರ ಬದುಕಿನಲ್ಲಿ ಆರ್ಥಿಕ ಸ್ಥಿರತೆ ಹಾಗೂ ಸ್ವಾವಲಂಬನೆ ಮೂಡಿಸುವ ಉದ್ದೇಶದಿಂದ, ಅರ್ಹ ಬಾಡಿಗೆ ಆಟೋ ಚಾಲಕರಿಗೆ ನೂತನ ಆಟೋಗಳನ್ನು ಒದಗಿಸುವ ಮಹತ್ವದ ಯೋಜನೆಯನ್ನು ಹಮ್ಮಿಕೊಳ್ಳಲು ಬಸವಮಾರ್ಗ ಫೌಂಡೇಶನ್ ಮುಂದಾಗಿದೆ ಎಂದು ಎಸ್. ಬಸವರಾಜು ತಿಳಿಸಿದರು.

ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಆಟೋ ಚಾಲಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗಿನಿಂದ ತಡರಾತ್ರಿಯವರೆಗೆ ದುಡಿಯುವ ಅನೇಕ ಆಟೋ ಚಾಲಕರು ಸ್ವಂತ ವಾಹನ ಹೊಂದಲು ಸಾಧ್ಯವಾಗದೆ ಬಾಡಿಗೆ ಆಟೋಗಳನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದಿನನಿತ್ಯದ ದುಡಿಮೆಯ ಬಹುಪಾಲು ಹಣ ಬಾಡಿಗೆ, ಇಂಧನ ಹಾಗೂ ವಾಹನ ನಿರ್ವಹಣೆಗೆ ಖರ್ಚಾಗುತ್ತಿರುವುದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಬಾಡಿಗೆ ಆಟೋ ಚಾಲಕರಿಗೆ ಸ್ವಂತ ಆಟೋ ಹೊಂದುವ ಅವಕಾಶ ಕಲ್ಪಿಸಿ, ಅವರ ಆದಾಯವನ್ನು ಹೆಚ್ಚಿಸುವ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಬಸವಮಾರ್ಗ ಫೌಂಡೇಶನ್ ಈ ಯೋಜನೆಯ ಬಗ್ಗೆ ಚಿಂತನೆ ನಡೆಸಿದೆ ಎಂದರು.

ದುಡಿಯುವ ಕೈಗಳಿಗೆ ಕೇವಲ ನೆರವು ನೀಡುವುದಷ್ಟೇ ಅಲ್ಲ, ಅವರು ಸ್ವಂತ ಕಾಲಿನ ಮೇಲೆ ನಿಂತು ಬದುಕುವಂತಹ ಅವಕಾಶ ಕಲ್ಪಿಸಬೇಕು ಎಂಬ ಆಶಯದೊಂದಿಗೆ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಹಲವು ವರ್ಷಗಳಿಂದ ಬಾಡಿಗೆ ವಾಹನದಲ್ಲಿ ದುಡಿಯುತ್ತಿರುವ ಚಾಲಕರಿಗೆ ಸ್ವಂತ ಆಟೋ ಖರೀದಿಸುವುದು ಆರ್ಥಿಕವಾಗಿ ಕಷ್ಟಕರವಾಗಿದೆ. ಅಂತಹ ಚಾಲಕರನ್ನು ಗುರುತಿಸಿ, ಸಾಧ್ಯವಾದಷ್ಟು ನೆರವು ಒದಗಿಸುವ ಮೂಲಕ ಅವರಿಗೆ ಸ್ವಂತ ಉದ್ಯೋಗದ ಅವಕಾಶ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಸ್ವಂತ ಆಟೋ ದೊರೆತರೆ ಚಾಲಕರು ಬಾಡಿಗೆ ಪಾವತಿಸುವ ಹೊರೆಯನ್ನು ಕಡಿಮೆ ಮಾಡಿಕೊಂಡು, ತಮ್ಮ ದುಡಿಮೆಯ ಹೆಚ್ಚಿನ ಭಾಗವನ್ನು ಕುಟುಂಬದ ಅಗತ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ ಹಾಗೂ ಭವಿಷ್ಯದ ಉಳಿತಾಯಕ್ಕೆ ಸಹಕಾರಿಯಾಗಲಿದೆ. ಜೊತೆಗೆ, ಚಾಲಕರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಮನೋಭಾವವೂ ಹೆಚ್ಚಲಿದೆ.‌ ಈ ಯೋಜನೆಯ ಮೂಲಕ ಅರ್ಹ ಹಾಗೂ ನಿಜವಾಗಿಯೂ ಅಗತ್ಯವಿರುವ ಬಾಡಿಗೆ ಆಟೋ ಚಾಲಕರನ್ನು ಗುರುತಿಸಿ, ಅವರಿಗೆ ನೂತನ ಆಟೋ ಒದಗಿಸುವ ಸಾಧ್ಯತೆಗಳ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *