ಹನೂರು: ವೀರಪ್ಪನ್ ದಾಳಿಯಲ್ಲಿ ಹುತಾತ್ಮರಾದ ಪೊಲೀಸರಿಗೆ 34ನೇ ವರ್ಷದ ಭಾವಪೂರ್ಣ ಶ್ರದ್ಧಾಂಜಲಿ

  • ಇನ್‌ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ರವರ ನೇತೃತ್ವದಲ್ಲಿ ಸ್ಮಾರಕಕ್ಕೆ ಹಾರ ಹಾಕಿ, ಪುಷ್ಪ ನಮನ

ಹನೂರು: 1992ರ ಆಗಸ್ಟ್ 14ರಂದು ಕಾಡುಗಳ್ಳ ನರಹಂತಕ ವೀರಪ್ಪನ್ ಮತ್ತು ಆತನ ತಂಡ ನಡೆಸಿದ ಅಮಾನವೀಯ ದಾಳಿಯಲ್ಲಿ ಹುತಾತ್ಮರಾದ ವೀರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ 34ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಶುಕ್ರವಾರ ರಾಮಾಪುರ ಪೊಲೀಸ್ ಠಾಣಾ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹನೂರು ತಾಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಯ ಮೀಣ್ಯಂ ಸಮೀಪದ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ರಾಮಾಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ರವರ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಸೇರಿದಂತೆ ಸಿಬ್ಬಂದಿ ವರ್ಗ ಸ್ಮಾರಕಕ್ಕೆ ಹಾರ ಹಾಕಿ, ಪುಷ್ಪ ನಮನ ಸಲ್ಲಿಸಿದರು. ನಂತರ ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಇನ್‌ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಅವರು, “ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಸಮಾಜದ ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ ನಮ್ಮ ವೀರ ಯೋಧರ ತ್ಯಾಗವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅವರ ರಕ್ತದಿಂದಲೇ ಇಂದು ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ” ಎಂದು ಹೇಳಿದರು.

1992ರಲ್ಲಿ ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಮೈಸೂರಿನ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಕೃಷ್ಣ ಅವರು ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದರು. ಶತ್ರುಗಳ ಗುಂಡಿಗೆ ಎದೆ ಒಡ್ಡಿ ಅವರು ಹುತಾತ್ಮರಾದರು. ಅವರ ಸಾಹಸ ಮತ್ತು ನಾಯಕತ್ವ ಇಂದಿಗೂ ಇಡೀ ಪೊಲೀಸ್ ಇಲಾಖೆಗೆ ಮಾದರಿಯಾಗಿದೆ.

ಅವರ ಜೊತೆ ಕರ್ತವ್ಯದಲ್ಲಿದ್ದ ಪಿಎಸ್‌ಐ ಶಕೀಲ್ ಅಹಮದ್ ಮತ್ತು ಹೆಡ್ ಕಾನ್ಸ್ಟೇಬಲ್ ಮೆನಗೊಂಡ ಅವರು ಕೂಡ ಅತ್ಯಂತ ಧೈರ್ಯದಿಂದ ಹೋರಾಡಿ ವೀರ ಮರಣ ಹೊಂದಿದರು. ಅಷ್ಟೇ ಅಲ್ಲದೆ, ಎಪಿಸಿ ಸುಂದರ್ ಅವರು ತಮ್ಮ ನಿಷ್ಠೆಯಿಂದ, ಹಾಗೂ ಕೆಎಸ್‌ಆರ್‌ಪಿ ತುಕಡಿಯ ಅಪ್ಪಚ್ಚು ಮತ್ತು ಕಾಳಪ್ಪ ಅವರು ತಂಡದೊಂದಿಗೆ ಹೆಜ್ಜೆ ಹಾಕಿ ಕೊನೆಯ ಉಸಿರಿರುವವರೆಗೂ ಹೋರಾಡಿ ಪ್ರಾಣತ್ಯಾಗ ಮಾಡಿದರು.

ದೇಶಭಕ್ತಿ ಎಂದರೆ ಕೇವಲ ಘೋಷಣೆ ಕೂಗುವುದಲ್ಲ. ಅದು ತನ್ನ ಸುಖ, ಕುಟುಂಬ, ಮಕ್ಕಳು ಎಲ್ಲವನ್ನೂ ಬದಿಗಿಟ್ಟು ನಾಡಿಗಾಗಿ ನಿಲ್ಲುವುದು. ಈ ಅಧಿಕಾರಿಗಳು ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ, ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಪ್ರಾಣ ನೀಡಿದ್ದಾರೆ. ಅವರ ವೀರ ಮರಣ ನಮಗೆಲ್ಲರಿಗೂ ದೇಶಪ್ರೇಮದ ಅತ್ಯಂತ ದೊಡ್ಡ ಪಾಠವಾಗಿದೆ.

“ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು, ಪ್ರಾಮಾಣಿಕವಾಗಿ ಜನಸೇವೆ ಮಾಡುವುದೇ ಅವರಿಗೆ ನಾವು ಕೊಡುವ ನಿಜವಾದ ಶ್ರದ್ಧಾಂಜಲಿ” ಎಂದು ಇನ್‌ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹುತಾತ್ಮರ ಕುಟುಂಬದ ಸದಸ್ಯರಿಗೆ ಗೌರವಿಸಲಾಯಿತು.

ಇದೆ ವೇಳೆ ಮುಖ್ಯಪೇದೆ ಇಲಿಯಾಸ್ ಪಾಷಾ, ಕುಮಾರಸ್ವಾಮಿ, ಪೇದೆಗಳಾದ ಮಣಿಕಂಠ, ಮೂರ್ತಿ, ಮಹಿಳಾ ಪೇದೆ ಶೋಭಾ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *