- “2019ರಲ್ಲಿ 720 ಜನರಿಗೆ ಸ್ಥಳದಲ್ಲೇ ನೇಮಕಾತಿ – ಈ ಬಾರಿಯೂ ದಾಖಲೆ ಬರೆಯೋಣ” – ಡಾ. ದತ್ತೇಶ್ ಕುಮಾರ್
ಹನೂರು: ಕೊಳ್ಳೇಗಾಲದ ಪ್ರತಿಷ್ಠಿತ ಮಾನಸ ಶಿಕ್ಷಣ ಸಂಸ್ಥೆ 30 ವರ್ಷಗಳ ಯಶಸ್ವಿ ಸಾಧನೆ ಹಿನ್ನೆಲೆಯಲ್ಲಿ ಆಗಸ್ಟ್ 22ರ ಶುಕ್ರವಾರ ಪಟ್ಟಣದ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ದತ್ತೇಶ್ ಕುಮಾರ್ ತಿಳಿಸಿದರು.
ಪಟ್ಟಣದ ಮಾನಸ ಫೌಂಡೇಶನ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ 2019ರಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ ಉದ್ಯೋಗ ಮೇಳದಲ್ಲಿ 84 ಕಂಪನಿಗಳು ಭಾಗವಹಿಸಿ, 1800 ಆಕಾಂಕ್ಷಿಗಳು ಬಂದಿದ್ದರು. ಅದರಲ್ಲಿ 720 ಜನರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗಿತ್ತು. ಈ ಬಾರಿಯೂ ಈ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ಮತ್ತು ಹನೂರಿನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸುವ ಆಲೋಚನೆ ಇದೆ. ಈ ಬಗ್ಗೆ ವಿವಿಧ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ದಿವ್ಯ ಸಾನಿಧ್ಯವನ್ನು ಸಾಲೂರು ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಆರ್. ಮಂಜುನಾಥ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಅಧ್ಯಕ್ಷತೆ ಡಾ. ದತ್ತೇಶ್ ಕುಮಾರ್ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7892942539, 9986599561, 9980112241
ಕಾರ್ಯಕ್ರಮದಲ್ಲಿ ರಾಮಾಪುರ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ರಾಜು, ಮುಖಂಡರಾದ ಸಿದ್ದಪ್ಪ, ವೆಂಕಟೇಗೌಡ, ರಮೇಶ್ ನಾಯ್ಡು, ಶ್ರೀನಿವಾಸ್, ಬಸವರಾಜು, ನಟರಾಜುಗೌಡ, ಶ್ರೀನಿವಾಸ್, ಸಂಸ್ಥೆಯ ವಿಶೇಷ ಅಧಿಕಾರಿಗಳಾದ ದಿನೇಶ್, ಚೆನ್ನಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
