ಹನೂರು: ವಿಶ್ವ ಆನೆ ದಿನಾಚರಣೆಯನ್ನು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವತಿಯಿಂದ ರಾಮಾಪುರದ ಜೆ.ಎಸ್.ಎಸ್ ಸಭಾ ಭವನದಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಹೊಸೂರು ಅವರು ಮಾತನಾಡಿ,”ಆನೆಗಳು ನಮ್ಮ ದೇಶದ ರಾಷ್ಟ್ರೀಯ ಪರಂಪರೆಯ ಸಂಕೇತವಾಗಿವೆ. ಅವು ಸಾವಿರಾರು ವರ್ಷಗಳಿಂದ ನಮ್ಮ ಸಂಸ್ಕೃತಿ, ಧರ್ಮ ಮತ್ತು ಪರಿಸರದ ಅವಿಭಾಜ್ಯ ಅಂಗವಾಗಿದೆ.
ಆನೆಗಳು ಕಾಡಿನ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆನೆಗಳ ಉಳಿವಿನಿಂದಲೇ ಕಾಡು, ನೀರು ಮತ್ತು ಇತರ ಜೀವಿಗಳ ಉಳಿವು ಸಾಧ್ಯ. ಆದ್ದರಿಂದ ಆನೆಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ಹೇಳಿದರು.
“ಆನೆ-ಮಾನವ ಸಂಘರ್ಷ ತಡೆಯಲು ರೈತರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಅರಣ್ಯ ಬೆಂಕಿ, ಪ್ಲಾಸ್ಟಿಕ್, ಕಳ್ಳ ಬೇಟೆಗಳಿಂದ ವನ್ಯಜೀವಿಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ವನ್ಯಜೀವಿ ಸಂರಕ್ಷಣೆಗೆ ಕೈಜೋಡಿಸಬೇಕು” ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣಾ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ವನ್ಯಜೀವಿಗಳ ಬಗ್ಗೆ ಪ್ರೀತಿ ಮತ್ತು ಗೌರವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವನ್ಯಜೀವಿಗಳನ್ನು ಕಾಪಾಡುವುದೇ ಪರಿಸರವನ್ನು ಕಾಪಾಡುವುದಾಗಿದೆ. ಮರಗಳನ್ನು ಬೆಳೆಸುವುದು, ನೀರನ್ನು ಉಳಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ ಎಂದು ಅವರು ತಿಳಿಸಿದರು.
ವಿಶ್ವ ಆನೆ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಚಿತ್ರಕಲೆ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು “ಆನೆಯನ್ನು ಉಳಿಸೋಣ, ಕಾಡನ್ನು ಉಳಿಸೋಣ” ಎಂದು ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ವಲಯ ಅರಣ್ಯಧಿಕಾರಿಗಳಾದ ಮಾದೇಶ, ರಾಜಶೇಖರ್ ಮೂರ್ತಿ, ಜಿತೇಂದ್ರ, ಪುಟ್ಟರಾಜು, ರವಿ, ಉಪವಲಯ ಅರಣ್ಯಾಧಿಕಾರಿಗಳಾದ ಮಧುಕುಮಾರ್, ಚಂದ್ರೆಗೌಡ್ರು, ಆನಂದ್ ಕುಮಾರ್, ವಿಜಯ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
