ಚಾಮರಾಜನಗರ: ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ ಪುನರ್ಚಿತ್ ವತಿಯಿಂದ “ಸಂವಿಧಾನ ಸಹವರ್ತಿ” ಮೂರು ವರ್ಷದ ಫೆಲೋಶಿಪ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ಆಸಕ್ತ ಯುವಜನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಘನತೆ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳನ್ನು ಖಾತರಿಪಡಿಸುತ್ತದೆ. ಈ ಮೌಲ್ಯಗಳು ಕೇವಲ ಪುಸ್ತಕಗಳಲ್ಲಿ ಉಳಿಯದೆ, ಗ್ರಾಮೀಣ ಸಮುದಾಯಗಳ ದೈನಂದಿನ ಬದುಕಿನಲ್ಲಿ ಸಾಕಾರಗೊಳ್ಳಬೇಕು ಎಂಬ ಉದ್ದೇಶದಿಂದ ಈ ಫೆಲೋಶಿಪ್ ರೂಪಿಸಲಾಗಿದೆ.
ಫೆಲೋಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಬುಡಕಟ್ಟು ಮತ್ತು ಕಾರ್ಮಿಕ ಹಕ್ಕುಗಳು, ಯುವಜನರ ಪ್ರಜಾಪ್ರಭುತ್ವ ಭಾಗವಹಿಸುವಿಕೆ, ಶಿಕ್ಷಣ, ಸ್ಥಳೀಯ ಆಡಳಿತ ಮತ್ತು ಪರಿಸರ ಮುಂತಾದ ವಿಷಯಗಳಲ್ಲಿ ಸಮುದಾಯದೊಂದಿಗೆ ಸಂವಾದ ಮತ್ತು ಚಟುವಟಿಕೆಗಳನ್ನು ನಡೆಸಲಿದ್ದಾರೆ. ಸರ್ಕಾರದ ಸೌಲಭ್ಯಗಳು ಮತ್ತು ಹಕ್ಕುಗಳಿಂದ ವಂಚಿತರಾಗಿರುವ ಜನರನ್ನು ಗುರುತಿಸಿ, ಅವರಿಗೆ ಅಗತ್ಯ ಸೇವೆಗಳು ತಲುಪುವಂತೆ ಸಹಕರಿಸುವುದೂ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಮತ್ತು ಕೊಳ್ಳೇಗಾಲ ಹಾಗೂ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕುಗಳಿಂದ ಒಟ್ಟು 20 ಯುವಜನರನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ.
ಅರ್ಹತೆ: 24–35 ವರ್ಷ ವಯಸ್ಸಿನ, ಕನಿಷ್ಠ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ತಮ್ಮ ಸಮುದಾಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವಜನರು ಅರ್ಜಿ ಸಲ್ಲಿಸಬಹುದು. ಮೂಲಭೂತ ಕಂಪ್ಯೂಟರ್ ಜ್ಞಾನ ಮತ್ತು ಉತ್ತಮ ಓದು-ಬರಹ ಕೌಶಲ್ಯ ಅಗತ್ಯ. ಇಂಗ್ಲಿಷ್ ಜ್ಞಾನ ಇದ್ದರೆ ಅನುಕೂಲ, ಆದರೆ ಕಡ್ಡಾಯವಲ್ಲ. ಎಚ್.ಡಿ. ಕೋಟೆಯ ಅರಣ್ಯಾಧಾರಿತ ಬುಡಕಟ್ಟು ಸಮುದಾಯದ ಯುವಜನರಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ.
ಫೆಲೋಗಳಿಗೆ ತಿಂಗಳ ಗೌರವಧನ, ತರಬೇತಿ, ನಿರಂತರ ಮಾರ್ಗದರ್ಶನ, ಸಹ-ಕಲಿಕೆಯ ಅವಕಾಶ ಹಾಗೂ ಫೆಲೋಶಿಪ್ ಪೂರ್ಣಗೊಂಡ ನಂತರ ಪ್ರಮಾಣಪತ್ರ ದೊರೆಯಲಿದೆ.
ಆಸಕ್ತರು [ಗೂಗಲ್ ಫಾರ್ಮ್ ಲಿಂಕ್] ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.10
ಹೆಚ್ಚಿನ ಮಾಹಿತಿಗಾಗಿ: ಪುನರ್ಚಿತ್, ನಾಗವಳ್ಳಿ ಗ್ರಾಮ, ಚಾಮರಾಜನಗರ ಜಿಲ್ಲೆ
📧 punarchithcollective@gmail.com
📞 9482187127 / 8762842253
