ಯಳಂದೂರು: ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಿಡಿಗೇಡಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಯಳಂದೂರು ವಕೀಲರ ಸಂಘದ ಎಲ್ಲಾ ಸದಸ್ಯರು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸರ್ವಸದಸ್ಯರ ತುರ್ತುಸಭೆಯಲ್ಲಿ ಭಾಗವಹಿಸಿದ ವಕೀಲರು, ಮಂಡ್ಯ ಜಿಲ್ಲೆಯ ವೇದಮೂರ್ತಿ ಎಂಬ ವ್ಯಕ್ತಿ ಮಹಾಜ್ಞಾನಿ ಬುದ್ಧ, ಸಮಾಜ ಸುಧಾರಕ ಬಸವಣ್ಣ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಅವಾಚ್ಯ ಶಬ್ಧಗಳಿಂದ ಮಾತನಾಡುವ ಮೂಲಕ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದಾನೆ. ಆರೋಪಿಯ ವಿರುದ್ಧ ಈಗಾಗಲೇ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ರಾಜ್ಯಾದ್ಯಂತ ಯಾವುದೇ ವಕೀಲರೂ ಆರೋಪಿಯ ಪರ ವಕಾಲತ್ತು ವಹಿಸಬಾರದು. ಮಹಾನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಇಂತಹ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಇಂತಹವರ ಸಂಖ್ಯೆ ಜಾಸ್ತಿಯಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ದಿಢೀರ್ ಖ್ಯಾತಿ ಗಳಿಸಬೇಕೆಂಬ ದುರುದ್ದೇಶದಿಂದ ರಾಷ್ಟ್ರನಾಯಕರ ಬಗ್ಗೆ ಕೇವಲವಾಗಿ ಮಾತನಾಡುವ ಇಂತಹ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಜರುಗಿಸುವ ಅಗತ್ಯವಿದೆ ಎಂದು ಆಗ್ರಹಿಸಿದರು. ಬಳಿಕ ಎಲ್ಲಾ ವಕೀಲರು ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಹೊರಗೆ ಬಂದು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಜೈಶಂಕರ್, ಉಪಾಧ್ಯಕ್ಷ ಬೂದಿತಿಟ್ಟು ಮುತ್ತುರಾಜು, ಕಾರ್ಯದರ್ಶಿ ಜಿ.ಎನ್.ಸಂಪತ್, ಜಂಟಿ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್, ಖಜಾಂಚಿ ರಂಜಿತಾ, ಮಾಜಿ ಅಧ್ಯಕ್ಷರಾದ ಸಿ.ಆರ್.ನಾಗರಾಜು, ಸಿ.ಸಿದ್ದರಾಜು, ಕೃಷ್ಣ, ಕೆ.ಬಿ.ಶಶಿಧರ್, ರಾಜಣ್ಣ, ವಕೀಲರಾದ ಎಂ.ರವೀಶ್, ಕಾಂತರಾಜು, ಹೊನ್ನೂರು ನಾಗರಾಜ್, ಅಶ್ವಿನ್ ಕುಮಾರ್, ಪರಶಿವಮೂರ್ತಿ, ಶ್ರೀನಿವಾಸಮೂರ್ತಿ, ಪ್ರಸನ್ನ, ಚಂದನ, ಉಮಾ, ಮೇಘ ಉಪಸ್ಥಿತರಿದ್ದರು.
