ಚಾಮರಾಜನಗರ: ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಎಚ್‍ಐವಿ/ಏಡ್ಸ್ ಅರಿವು ಕಾರ್ಯಕ್ರಮ ಬುಧವಾರ (ಆ.12) ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಮಧು ಅವರು ಮಾತನಾಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವ ಯುವ ಶಕ್ತಿಯಾಗಿದ್ದು, ದೇಶದ ಪ್ರಗತಿ ಹಾಗೂ ಭವಿಷ್ಯ ರೂಪಿಸುವಲ್ಲಿ ಇವರ ಕೊಡುಗೆ ಅಮೂಲ್ಯವಾಗಿದೆ. ಯುವ ಜನರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ಸಾಮಾಜಿಕ ಜವಾಬ್ದಾರಿ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಡಾ. ರವಿಕುಮಾರ್ ಅವರು ಮಾತನಾಡಿ ಯುವಕರಲ್ಲಿ ಮಾನಸಿಕ ಆರೋಗ್ಯ, ವೈಯಕ್ತಿಕ ಆರೋಗ್ಯ ಹಾಗೂ ಎಚ್‍ಐವಿ/ಏಡ್ಸ್ ಕುರಿತು ಸರಿಯಾದ ಅರಿವು ಅತ್ಯಂತ ಮುಖ್ಯವಾಗಿದೆ. ಎಚ್‍ಐವಿ ಮತ್ತು ಏಡ್ಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಪ್ಪು ಮಾಹಿತಿ, ಸಂದೇಶಗಳನ್ನು ಪರಾಮರ್ಶಿಸಿ ವಿವೇಚನೆಯಿಂದ ಸ್ವೀಕರಿಸಬೇಕು ಎಂದರು.
ಎಚ್‍ಐವಿ ಹರಡುವ ವಿಧಾನಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಎಚ್‍ಐವಿ ಪರೀಕ್ಷೆಯ ಉದ್ದೇಶ, ಸಮಯೋಚಿತವಾಗಿ ಆರೋಗ್ಯ ತಪಾಸಣೆ ಒಳಗಾಗುವ ಮಹತ್ವವನ್ನು ಡಾ. ರವಿಕುಮಾರ್ ಅವರು ವಿವರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಹೆಚ್. ಶ್ರೀನಿವಾಸ್ ಅವರು ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವಕರು ದೇಶದ ಬೆನ್ನೆಲುಬು ಇದ್ದಂತೆ. ಯುವಶಕ್ತಿಯು ದೇಶದ ಅಭಿವೃದ್ಧಿಗೆ ಅತ್ಯಂತ ಅವಶ್ಯಕವಾಗಿದ್ದು, ಯುಜನರು ಆದರ್ಶಪ್ರಾಯರಾಗಿರುವ ಸ್ವಾಮಿ ವಿವೇಕಾನಂದರ ಜೀವನ, ಚಿಂತನೆಗಳು ಮತ್ತು ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕರಾದ ಮಹದೇವ ಪ್ರಸಾದ್ ಅವರು ಮಾತನಾಡಿ ಎಚ್‍ಐವಿ ಕುರಿತು ಸರಿಯಾದ ಜ್ಞಾನ ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ಸೋಂಕನ್ನು ತಡೆಗಟ್ಟಲು ಸಾಧ್ಯವಿದೆ. ಯುವಕರು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಬೇಕು. ಎಚ್‍ಐವಿ/ಏಡ್ಸ್ ಕುರಿತು ವೈಜ್ಞಾನಿಕ ಮತ್ತು ಸತ್ಯಾಧಾರಿತ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಎಚ್‍ಐವಿ/ಏಡ್ಸ್ ಅರಿವು ಮತ್ತು ಸಾಮಾಜಿಕ ಜವಾಬ್ದಾರಿ ಕುರಿತ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ರೆಡ್ ರಿಬ್ಬನ್ ಕ್ಲಬ್ ಸಂಯೋಜಕರಾದ ಪೆÇ್ರ. ಸೌಜನ್ಯ, ರೆಡ್ ಕ್ರಾಸ್ ಸಂಯೋಜಕರಾದ ನಾಗೇಶ್, ಡಾ. ಮನಿಲ್ ರಾಜ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related