ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಗೀತ, ನಾಟಕದ ಬಗ್ಗೆ ಪ್ರೋತ್ಸಾಹ ನೀಡಿ : ರಂಗಕರ್ಮಿ ಕೆ. ವೆಂಕಟರಾಜು


ಚಾಮರಾಜನಗರ: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಗೀತ, ನಾಟಕಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಆಸಕ್ತಿ ಇದ್ದವರಿಗೆ ಪ್ರೋತ್ಸಾಹ ನೀಡಬೇಕು ಎಂದು ಎಂದು ರಂಗ ಕರ್ಮಿಗಳಾದ ಕೆ. ವೆಂಕಟರಾಜು ಅವರು ಹೇಳಿದರು.

ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿಂದು ಕನ್ನಡ ಮತ್ತು ಸಂಸ್ಕೃತಿಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಡಿ ತಿಂಗಳ ಅತಿಥಿಯಾಗಿ ಅವರು ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಮನದಾಳದ ಮಾತುಗಳನ್ನು ನುಡಿದರು.


ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಹೊಸ ಜನಾಂಗವೇ ಸೃಷ್ಟಿಯಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಗೀತ, ನಾಟಕಗಳ ಬಗ್ಗೆ ತಿಳಿಸುವಂತಾಗಬೇಕು. ಆಸಕ್ತ ವಿದ್ಯರ್ಥಿಗಳಿಗೆ ಉತ್ತೇಜನ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಕಲೆ ಸಾಹಿತ್ಯಗಳು ಬೆಳೆಯದಿದ್ದರೆ ರಂಗಭೂಮಿ ಬೆಳೆಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. 

ನಾಟಕಗಳಲ್ಲಿ ನಟಿಸುತ್ತಿದ್ದ ನಮ್ಮ ತಂದೆಯವರ ಪ್ರೇರಣೆಯಿಂದ ನನ್ನ ರಂಗ ಪ್ರವೇಶವಾಯಿತು. ಟಿವಿ, ಮೊಬೈಲ್ ಇರದೆ ಇದ್ದ ಸಂದರ್ಭದಲ್ಲಿ ನಗರದ ರಾಮಮಂದಿರದ ಮುಂಭಾಗ ಪ್ರಹ್ಲಾದ ಚರಿತ್ರೆ, ಕಿಸ ಗೌತಮಿ, ಚೌ ಚೌ ನಂತಹ ನಾಟಕಗಳಲ್ಲಿ ಹಲವು ಪಾತ್ರಗಳಲ್ಲಿ ನಮ್ಮ ತಂದೆಯವರು ನಟಿಸುತ್ತಿದ್ದರು. ಇದರಿಂದ ನಾಟಕಗಳ ಬಗ್ಗೆ ಅಭಿಮಾನ ಮತ್ತು ಆಸಕ್ತಿ ಹುಟ್ಟಿತು. 1974ರಲ್ಲಿ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕ್ಷೇತ್ರ ಶಿಕ್ಷಕರಾಗಿ ಕರ್ತವ್ಯದೊಂದಿಗೆ ನಾಟಕಗಳು, ಸಾಹಿತ್ಯ, ಅನುವಾದ, ಬರವಣಿಗೆಗಳಂತಹ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದೆ ಎಂದು ತಮ್ಮ ರಂಗಭೂಮಿ ಕುರಿತ ಒಡನಾಟದ ಬಗ್ಗೆ ಹೇಳಿದರು. 

ದೇಶ ಸುತ್ತು ಕೋಶ ಓದು ಎನ್ನುವ ಹಾಗೆ ದಕ್ಷಿಣ ಕನ್ನಡ ಮಾತ್ರವಲ್ಲ ಉತ್ತರ ಕರ್ನಾಟಕ ಜಿಲ್ಲೆಗಳು ಕೂಡ ಅದ್ಭುತ. ನಾವು ಅದನ್ನು ನೋಡುವ ದೃಷ್ಟಿ ಬದಲಾಗಬೇಕು. ಆ ಭಾಗದ ಜನರು, ಆಹಾರ, ಜನಗಳ ಒಡನಾಟ, ಸಂಸ್ಕøತಿ, ಸಾಹಿತ್ಯ ಕೂಡ ಬಹಳ ಸುಂದರವಾಗಿದೆ ಎಂದು ಅವರು ತಿಳಿಸಿದರು.

ನಗರದ ಕಲಾ ರಂಗತಂಡಗಳು ತಮ್ಮ ಇತಿಮಿತಿಯಲ್ಲಿ ಕೆಲಸ ಮಾಡುತ್ತಿವೆ. ಎಲ್ಲಾ ತಂಡಗಳು ವೈವಿಧ್ಯಮಯವಾಗಿ ಹೊಸ ಹೊಸ ಸಂವೇದನೆ ಅಳವಡಿಸಿಕೊಳ್ಳಬೇಕು. ನಾಟಕಗಳು ಸರಳವಾಗಿದ್ದಷ್ಟು ಕೂಡ ಅದರ ಪ್ರಭಾವ ಹೆಚ್ಚಾಗುತ್ತದೆ ಮತ್ತು ನೋಡುವ ಆಸಕ್ತಿಯು ಹೆಚ್ಚುತ್ತದೆ ಎಂದು ರಂಗಕರ್ಮಿಗಳಾದ ಕೆ. ವೆಂಕಟರಾಜು ಅವರು ತಮ್ಮ ಅನುಭವದ ಮಾತುಗಳನ್ನಾಡಿದರು. 

ಸಂವಾದದಲ್ಲಿ ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ನಿರ್ಮಲಾ ಮಠಪತಿ ಅವರು ಮಾತನಾಡಿ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಯನ ಸಭಾಂಗಣದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ವಿವಿಧ ಭಾಗಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹನೀಯರನ್ನು ಕರೆದು ಅವರ ಜೀವನ ಸಾಧನೆಗಳ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತಿತ್ತು. ಮೊದಲ ಬಾರಿಗೆ ಚಾಮರಾಜನಗರದಲ್ಲಿ ಈ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ರಂಗಕರ್ಮಿ ಕೆ. ವೆಂಕಟರಾಜು ಅವರು ಒಂದು ವಿಶ್ವಕೋಶ ಇದ್ದ ಹಾಗೆ. ಕಲೆ, ಸಾಹಿತ್ಯ, ಪರಂಪರೆ, ಸಂಘಟನೆ, ಬರವಣಿಗೆ, ಅನುವಾದ, ಮುಂತಾದವುಗಳಲ್ಲಿ ಅವರು ಎತ್ತಿದ ಕೈ. ಸ್ವಾತಂತ್ರ್ಯ ಹೋರಾಟಗಾರರ ಮನೆಯಲ್ಲಿ ಹುಟ್ಟಿ ಹೋರಾಟದ ಕಿಚ್ಚು, ಗಾಂಭೀರ್ಯ, ಚಿಂತನೆ ಮತ್ತು ಸರಳತೆಯನ್ನು ಮೈಗೂಡಿಸಿಕೊಂಡು ಬೆಳೆದು ಬಂದಿದ್ದಾರೆ. ಇಂತಹ ಮಹನೀಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಜಂಟಿ ನಿರ್ದೇಶಕರಾದ ನಿರ್ಮಲಾ ಮಠಪತಿ ಅವರು ತಿಳಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು, ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರಭು, ಜಾನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *