ರಂಗತಂಡಗಳು ಮಾನವೀಯತೆ ಪಸರಿಸಲಿ: ಜನ್ನಿ

ಚಾಮರಾಜನಗರ: ದ್ವೇಷ, ಅಸೂಯೆಗಳು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿರುವ ಇಂದಿನ ಸಂದರ್ಭದಲ್ಲಿ ರಂಗತಂಡಗಳು ಜನಮನದಲ್ಲಿ ಮಾನವೀಯತೆ, ಪ್ರೀತಿ ಹಾಗೂ ಮೈತ್ರಿಯ ಭಾವನೆಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದು ರಂಗ ನಿರ್ದೇಶಕ ಎಚ್. ಜನಾರ್ಧನ ಜನ್ನಿ ಹೇಳಿದರು.

ರಂಗತರಂಗ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ರಂಗಾಯಣದ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ‘ರಂಗಭೀಷ್ಮ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಮನುಷ್ಯ ಜೀವಂತವಾಗಿರುವಾಗ ‘ನಾನು, ನನ್ನದು’ ಎಂದು ಮೆರೆಯುತ್ತಾನೆ. ಆದರೆ ಉಸಿರು ನಿಂತ ಬಳಿಕ ಯಾವುದೂ ಆತನೊಂದಿಗೆ ಬರುವುದಿಲ್ಲ. ಆದ್ದರಿಂದ ಬದುಕಿರುವಾಗಲೇ ಸಮಾಜದಲ್ಲಿ ಪ್ರೀತಿ, ಮಾನವೀಯತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು.

ಸಮಾರೋಪ ನುಡಿಗಳನ್ನಾಡಿದ ರಂಗಾಯಣದ ಅಧ್ಯಕ್ಷ ಸತೀಶ್ ತಿಪಟೂರು, ಜನ್ನಿ ಅವರು ರಂಗಚಟುವಟಿಕೆಗಳ ಮೂಲಕ ನಾಡಿನಾದ್ಯಂತ ಸೇವೆ ಸಲ್ಲಿಸಿರುವ ಹಿರಿಯ ರಂಗಕರ್ಮಿ. ಅವರಿಗೆ ‘ರಂಗಭೀಷ್ಮ ಪ್ರಶಸ್ತಿ’ ನೀಡಿರುವುದು ಸೂಕ್ತವಾಗಿದೆ. ಅವರಿಗೆ ಇನ್ನಷ್ಟು ಗೌರವ, ಪ್ರಶಸ್ತಿಗಳು ದೊರೆಯಲಿ ಎಂದು ಹಾರೈಸಿದರು.

ರಂಗತರಂಗ ಟ್ರಸ್ಟ್ 34 ವರ್ಷಗಳನ್ನು ಪೂರೈಸಿರುವುದು ಮಹತ್ವದ ಸಾಧನೆಯಾಗಿದ್ದು, ಮುಂದೆಯೂ ತಂಡವು ಯಶಸ್ವಿಯಾಗಿ ರಂಗಚಟುವಟಿಕೆಗಳನ್ನು ನಡೆಸಲಿ ಎಂದು ಆಶಿಸಿದರು.

ಜನಾರ್ಧನ ಜನ್ನಿ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ವೆಂಕಟರಮಣಸ್ವಾಮಿ ಅವರು ‘ರಂಗಭೀಷ್ಮ ಪ್ರಶಸ್ತಿ’ ಪ್ರದಾನ ಮಾಡಿದರು. ನಾಟಕೋತ್ಸವ ಯಶಸ್ವಿಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರಂತರವಾಗಿ ನಾಟಕ ಚಟುವಟಿಕೆಗಳು ನಡೆಯುವಂತಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಮಹಾಲಿಂಗಗಿರ್ಗಿ ವಹಿಸಿದ್ದರು. ಡಾ. ಸುಪ್ರಿಯಾ ಸುರೇಂದ್ರ, ಸಾಹಿತಿ ಸೋಮಶೇಖರ ಬಿಸಲ್ವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಾಟಕೋತ್ಸವದ ಅಂಗವಾಗಿ ಗಿರೀಶ್ ಕಾರ್ನಾಡ್ ರಚನೆಯ ‘ಅಗ್ನಿ ಮತ್ತು ಮಳೆ’ ನಾಟಕವನ್ನು ರಂಗಾಯಣದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Leave a Reply

Your email address will not be published. Required fields are marked *