ಚಾಮರಾಜನಗರ: ಮಾನವ ನಿರ್ಮಿತ ಪರಿಸರದಿಂದ ಪ್ರಾಕೃತಿಕ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು, ಇದನ್ನು ತಡೆಗಟ್ಟುವುದು ಅತಿ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಅವರು ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೆಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ, ಶಾಲಾ ಶಿಕ್ಷಣ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಾಳಿ, ನೀರು, ಮಣ್ಣು, ಖನಿಜ ಸಂಪತ್ತು ಸೇರಿದಂತೆ ಒಳಗೊಂಡಿರುವ ನೈಸರ್ಗಿಕ ಪ್ರಕೃತಿ ಪರಿಸರದ ಮೇಲೆ ಕಟ್ಟಡಗಳು, ಕೈಗಾರಿಕಾ ಘಟಕಗಳು, ಇನ್ನಿತರ ಮಾನವ ನಿರ್ಮಿತ ಪರಿಸರದಿಂದ ಪ್ರಸ್ತುತ ದಿನಗಳಲ್ಲಿ ಅನೇಕ ದುಷ್ಪÀರಿಣಾಮಗಳು ಬೀರುತ್ತಿವೆ. ಇದನ್ನು ತಡೆಯುವುದು ಮುಖ್ಯ ಕೆಲಸವಾಗಿದೆ ಎಂದರು.
ಮೂಲಭೂತ ಕರ್ತವ್ಯಗಳಲ್ಲಿ ನೈಸರ್ಗಿಕ ಸಂಪನ್ಮೂಲ ಪರಿಸರ ಕಾಪಾಡುವುದು ಸಹ ಸೇರಿದೆ. ಗಾಳಿ, ನೀರು, ಮಣ್ಣು, ಅರಣ್ಯದಂತಹ ಪ್ರಕೃತಿ ಸಂಪತ್ತನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಗಿಡಮರಗಳನ್ನು ಬೆಳೆಸಿ ಪೋಷಿಸುವುದರಿಂದ ಆಮ್ಲಜನಕ ಪೂರೈಕೆಯಾಗುತ್ತದೆ. ಪರಿಸರ ಸಮತೋಲನವಾಗಲಿದೆ. ಅರಣ್ಯ ಪ್ರದೇಶ ಹೆಚ್ಚಾದಂತೆ ಸಕಾಲಕ್ಕೆ ಮಳೆ ಸುರಿದು ಬೇಸಾಯ, ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಆರೋಗ್ಯವಂತರಾಗಲು ಉತ್ತಮ ಪರಿಸರ ಇರಬೇಕು. ಶುದ್ದ ಗಾಳಿ, ಬೆಳಕು, ನೀರು ಮುಂದಿನ ಪೀಳಿಗೆಗೂ ಬಿಟ್ಟು ಕೊಡಬೇಕು. ಒಂದು ಮರ ಕಡಿದರೆ 10 ಗಿಡಗಳನ್ನು ನೆಡಬೇಕು. ಪರಿಸರ ಪ್ರೇಮ ಪ್ರತಿಯೊಬ್ಬರಲ್ಲೂ ಮೂಡಬೇಕು. ಪರಿಸರ ಜಾಗೃತಿಗಾಗಿಯೇ 1973 ರಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿದ್ದು, ಹಸಿರು ಶ್ವಾಸಕೋಶದಂತಿದೆ. ನಮ್ಮ ಜಿಲ್ಲೆಯನ್ನು ಪರಿಸರ ಸ್ನೇಹಿಯನ್ನಾಗಿಸಲು ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕಿದೆ. ಕೆರೆ-ಕಟ್ಟೆಗಳಲ್ಲಿ ಪ್ಲಾಸ್ಟಿಕ್ ಹಾಕದೆ ಉತ್ತಮವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.
ಅಭಿವೃದ್ದಿ ಹಾಗೂ ಪರಿಸರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡನ್ನು ನಾವು ಸಮನಾಗಿ ತೆಗೆದುಕೊಂಡು ಪ್ರಗತಿ ಪರ ಕಾರ್ಯಗಳನ್ನು ಮಾಡಬೇಕಿದೆ. ಉತ್ತಮ ಪರಿಸರ ಕಾಪಾಡುವಲ್ಲಿ ಎಲ್ಲರ ಹೊಣೆಗಾರಿಕೆ ಇದೆ. ಪರಿಸರ ಕಾಳಜಿ ಹೊಂದುವುದು ಅತ್ಯಂತ ಮುಖ್ಯವಾಗಿದ್ದು ಸಸಿ ನೆಟ್ಟು ಪೋಷಣೆ ಮಾಡುವ ಮೂಲಕ ಪರಿಸರಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಧೀನಬಂಧು ಸಂಸ್ಥೆಯ ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದ ಪ್ರೊ. ಜಿ.ಎಸ್. ಜಯದೇವ್ ಅವರು ಪ್ರಕೃತಿ ಪ್ರೀತಿಸುವ ಮತ್ತು ಗೌರವಿಸುವ ಸ್ವಭಾವ ನಮ್ಮದಾಗಬೇಕು. ಸುಂದರವಾದ ಪರಿಸರ ನೈಸರ್ಗಿಕ ವಾತಾವರಣದಲ್ಲಿ ಬದುಕುವ ಅವಕಾಶವಿದೆ. ಆದರೆ ದುರಾಸೆಯಿಂದ ಪ್ರಕೃತಿ ಪರಿಸರ ನಾಶ ಮಾಡಿದರೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಆದರೆ ಪ್ರಕೃತಿ ಕ್ರಮೇಣ ತನ್ನನ್ನು ತಾನು ಸರಿಪಡಿಸಿಕೊಳ್ಳಬಲ್ಲದು. ಆದರೆ ಮಾನವ ಮೊದಲಿನಂತಾಗಲು ಸಾಧ್ಯವಿಲ್ಲ ಎಂದರು.
ಜಾಗತಿಕ ತಾಪಮಾನ ಮಿತಿ ಮೀರಿ ಹೆಚ್ಚಾಗುತ್ತಲೇ ಇದೆ. ಕೈಗಾರಿಕಾ ಕ್ರಾಂತಿ, ಕೊಳವೆಬಾವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊರೆಯುತ್ತಿರುವುದು, ಅರಣ್ಯ ನಾಶ, ಕೀಟ ನಾಶಕ ಬಳಕೆ, ಇನ್ನಿತರ ಕಾರಣಗಳಿಂದ ಪರಿಸರದ ಮೇಲೆ ಅಪಾಯ ಹೆಚ್ಚಾಗುತ್ತಲೇ ಇದೆ. ಹೀಗೆಯೇ ಮುಂದುವರೆದರೆ ಮತ್ತಷ್ಟು ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಪರಿಸರ ಅಸಮತೋಲನಕ್ಕೆ ಅವಕಾಶವಾಗದಂತೆ ಪರಿಸರ ಪ್ರಜ್ಞೆ ಮೂಡಬೇಕಿದೆ ಎಂದು ಪ್ರೊ. ಜಿ.ಎಸ್. ಜಯದೇವ್ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸ್ನೇಹಿ ವಸ್ತು ಬಳಸಿ ಎಂಬ ಸದಾಶಯದೊಂದಿಗೆ ಭಾಗವಹಿಸಿದ್ದ ಎಲ್ಲರಿಗೂ ಬಟ್ಟೆ ಬ್ಯಾಗ್ ಗಳನ್ನು ವಿತರಿಸಲಾಯಿತು. ಆರಂಭದಲ್ಲಿಯೇ ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಗಣ್ಯರು ಗಿಡನೆಟ್ಟು ನೀರೆರೆದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಉಮಾಶಂಕರ್, ನಗರಸಭೆ ಆಯುಕ್ತರಾದ ಪರಶುರಾಮ್ ಎಂ. ಛಲವಾದಿ, ಪರಿಸರ ಎಂಜಿನಿಯರ್ ರೂಪಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.