ಮೈಸೂರು: ವಿಶ್ವ ಪರಿಸರ ದಿನದ ಪ್ರಯುಕ್ತ ಬೆಮೆಲ್ ನಗರದ ಆರ್ಚ್ ಬಳಿ ಇರುವ ತರಕಾರಿ ಸಂತೆಯಲ್ಲಿ ಬಟ್ಟೆ ಬ್ಯಾಗ್ ಗಳನ್ನು ಸಾಂಕೇತಿಕವಾಗಿ ನಾಗರಿಕರಿಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸಿ, ಪರಿಸರ ದಿನಾಚರಣೆಯನ್ನು ಸರಳ ಸುಂದರವಾಗಿ ಆಚರಿಸಲಾಯಿತು.
ಈ ಜಾಗೃತಿ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮೈಸೂರು ಆಕಾಶವಾಣಿಯ ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷರಾದ ಹಾಗೂ ಕೇಂದ್ರ ಸರ್ಕಾರದ ಆರ್‌ಎಮ್‌ಪಿ ಯ ಹಿರಿಯ ಶುಶ್ರೂಷಕರಾದ ಕಣ್ಣೂರು ವಿ ಗೋವಿಂದಾಚಾರಿ ರವರು ಜಾಗೃತಿ ಅಭಿಯಾನವನ್ನು ಬಟ್ಟೆ ಬ್ಯಾಗ್ ಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ...ಈ ಪರಿಸರ ಜಾಗೃತಿ ಎನ್ನುವಂತದ್ದು ಮೊದಲು ನಮ್ಮ ನಮ್ಮ ಮನೆಯಿಂದ ಪ್ರಾರಂಭವಾಗಬೇಕು. ನಾನು ಇದುವರೆಗೂ ಯಾವುದೇ ಪ್ಲಾಸ್ಟಿಕ್ ಕವರ್ ಅನ್ನ ಬಳಸುವುದಿಲ್ಲ. ನನ್ನ ಬಳಿ ಬಟ್ಟೆ ಬ್ಯಾಗ್ ಇದ್ದೇ ಇರುತ್ತದೆ. ಜೊತೆಗೆ ಈ ದಿನಾಚರಣೆ ಎನ್ನುವುದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿ ದಿನವೂ ಕೂಡ ನಾವು ನಮ್ಮ ದಿನಚರಿಯಲ್ಲಿ ಪ್ರಕೃತಿಯನ್ನು ಪ್ರೀತಿಸಬೇಕು.
ಜೊತೆ ಜೊತೆಗೆ ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಅದನ್ನು ಸಂರಕ್ಷಣೆ ಮಾಡುವತ್ತಾ ಸಾಗಬೇಕು ಎಂದು ಕರೆ ನೀಡಿದ್ದಾರೆ.
ನಾವು ವೈಜ್ಞಾನಿಕವಾಗಿ ಚಿಂತಿಸುವುದಾದರೆ ಆರೋಗ್ಯದ ದೃಷ್ಟಿಯಲ್ಲಿ ಪರಿಸರವನ್ನ ಹೋಲಿಸಿಕೊಂಡರೆ ನಾವು ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಪರಿಸರವನ್ನ ಅವನತಿಯತ್ತ ಸಾಗುವಂತೆ ಮಾಡುತ್ತಿದ್ದೇವೆ. ಇದಕ್ಕೆ ನಾವು ನೀವು ಎಲ್ಲರೂ ಕಾರಣರು. ಇದರಿಂದ ಹೊರಬರಬೇಕಾದರೆ ಇವತ್ತಿನಿಂದಾದರೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮೊದಲು ಮಕ್ಕಳಿಗೆ ಪರಿಸರ ಕುರಿತಾಗಿ ತಿಳುವಳಿಕೆ ನೀಡಬೇಕು. ಆಗ ಆಗ ಮಾತ್ರ ಅದು ಪರಿಣಾಮಕಾರಿಯಾಗಿ ಜಾರಿಗೆ ಬರಲು ನೆರವಾಗುತ್ತದೆ ಎಂದರು.
ತರಕಾರಿ ಇನ್ನಿತರ ಪದಾರ್ಥಗಳನ್ನು ಖರೀದಿಸಲು ಬಂದಿದ್ದ ನಾಗರಿಕರು ಗ್ರಾಹಕರ ಮನವೊಲಿಸಿ ಇನ್ನು ಮುಂದೆ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿಕೊಂಡರು. ಹಲವರಿಗೆ ಬಟ್ಟೆ ಬ್ಯಾಗ್ ಗಳನ್ನು ಕೂಡ ಈ ಸಂದರ್ಭದಲ್ಲಿ ವಿತರಿಸ ಲಾಯಿತು.
ಇವರ ಜೊತೆ ಕೈಜೋಡಿಸುತ್ತಿರುವ ಮೈಸೂರಿನ ದೀಪ್ತಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ, ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ಮಾತನಾಡಿ ತಂತ್ರಜ್ಞಾನ ಬೆಳೆದಂತೆ ಮಾನವ ಇಂದು ಏನೆಲ್ಲಾ ಸಾಧನೆ ಮಾಡಿದ್ದಾನೆ. ಆದರೆ ಪ್ರಕೃತಿಯ ಮುಂದೆ ಕುಬ್ಜನಾಗಿದ್ದಾನೆ!. ಪರಿಸರವನ್ನ ಮಿತಿಮೀರಿ ಹಾಳು ಮಾಡುವುದರೊಂದಿಗೆ ತಾನು ತೋಡಿದ ಗುಂಡಿಗೆ ತಾನೇ ಬೀಳುವಂತಾಗಿದ್ದಾನೆ ಎಂದು ಅಭಿಪ್ರಾಯಪಟ್ಟರು.
ಜೊತೆಗೆ ಪ್ರಕೃತಿ ಮಾನವನ ಎಲ್ಲಾ ದೌರ್ಜನ್ಯವನ್ನು ಸಹಿಸಿಕೊಂಡು, ಹಲವು ಬಾರಿ ಮುನಿಸಿಕೊಂಡಿರುವುದು ಅವನ ಅರಿವಿಗೆ ಬಂದಿದ್ದರೂ ಕೂಡ ಪಾಠ ಕಲಿಯುತ್ತಿಲ್ಲ. ಇದು ಮುಂದುವರಿಯದಂತೆ ನೋಡಿಕೊಳ್ಳಬೇಕು ಎಂದು ಎಲ್ಲರಲ್ಲೂ ಮನವಿ ಮಾಡಿಕೊಂಡರು.
ಪ್ರತಿದಿನ ಏನಾದರೊಂದು ಅಭಿಯಾನವನ್ನು ಹಮ್ಮಿಕೊಂಡು ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಇವರ ಸೇವೆಯನ್ನ ಅಲ್ಲಿ ನೆರೆದಿದ್ದವರು ಪ್ರಶಂಶಿಸಿದರು.
Like this:
Like Loading...
Related