ಚಾಮರಾಜನಗರ: ಹನೂರು ತಾಲೂಕಿನ ಕೂಳಿಹಟ್ಟಿ, ಬೆಳ್ಳಾಜಿ ಬೀಟ್ ಪ್ರದೇಶದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಬಕಾರಿ ಹಾಗೂ ಅರಣ್ಯ ಇಲಾಖಾಧಿಕಾರಿಗಳು ಜಂಟಿ ಕಾರ್ಯಾಚರಣೆ ಕೂಂಬಿಂಗ್ ನಡೆಸಿ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ 292 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ವಶಪಡಿಸಿಕೊಂಡ ಗಾಂಜಾ ಗಿಡಗಳ ಒಟ್ಟು ತೂಕ 213 ಕೆ.ಜಿ, 600 ಗ್ರಾಂ ಇದೆ. ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಬಸವರಾಜ ಹಡಪದ, ಬಿ.ಆರ್.ಟಿ. ಡಿ.ಸಿ.ಎಫ್ ಶ್ರೀಪತಿ, ಚಾಮರಾಜನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಚಂದ್ರ ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಕೆ.ಟಿ. ವಿಜಯ್ ಕುಮಾರ್, ಅಬಕಾರಿ ನಿರೀಕ್ಷಕರಾದ ಸಿ.ಎಂ. ದಯಾನಂದ, ಉಮಾಶಂಕರ್, ಬೈಲೂರು ವಲಯ ಅರಣ್ಯಾಧಿಕಾರಿ ಡಿ. ದೇವರಾಜು, ಉಪವಲಯ ಅರಣ್ಯಾಧಿಕಾರಿ ಎಸ್. ರಾಜೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಎಲ್ಲಾ ಗಾಂಜಾ ಗಿಡಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅಬಕಾರಿ ನಿರೀಕ್ಷಕರಾದ ದಯಾನಂದ್, ಉಪನಿರೀಕ್ಷಕರಾದ ನಂದಿನಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಲು ತನಿಖೆ ಮುಂದುವರೆಸಿದ್ದಾರೆ. ಮಾದಕ ವಸ್ತುಗಳ ಈ ಪ್ರಕರಣದ ಸಂಶಯದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಅಬಕಾರಿ ಹಾಗೂ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಜಂಟಿ ಕಾರ್ಯಾಚರಣೆ ನಡೆಸಿ ಗಾಂಜಾ ಗಿಡಗಳನ್ನು ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಅಬಕಾರಿ ಜಂಟಿ ಆಯುಕ್ತರು ಹಾಗೂ ಹಿರಿಯ ಅರಣ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ.
Related