- ಮುಖ್ಯಮಂತ್ರಿಗಳ ಕೊಳ್ಳೇಗಾಲ ಭೇಟಿ ಕಾರ್ಯಕ್ರಮ ಹಿನ್ನೆಲೆ
ಚಾಮರಾಜನಗರ. ಸೆ.27(ಕರ್ನಾಟಕ ವಾರ್ತೆ) ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಇದೇ ಸೆಪ್ಟೆಂಬರ್ 30 ರಂದು ಕೊಳ್ಳೇಗಾದಲ್ಲಿ ಕೊಳ್ಳೇಗಾಲ ಹಾಗೂ ಹನೂರು ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿರುವ ಹಿನ್ನಲೆಯಲ್ಲಿ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲಕ್ಕೆ ಇಂದು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಮೊದಲಿಗೆ ಮಹದೇಶ್ವರ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟು ಹೆಲಿಪ್ಯಾಡ್ ನಿರ್ಮಾಣಕ್ಕೆ ಕೈಗೊಂಡಿರುವ ಸಿದ್ದತೆಗಳನ್ನು ವೀಕ್ಷಣೆ ಮಾಡಿದರು.ಎರಡು ಹೆಲಿಕಾಪ್ಟರ್ ಗಳಿಗೆ ಅಗತ್ಯವಿರುವ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಎಲ್ಲ ಮುಂಜಾಗ್ರತ ಕ್ರಮಗಳೊಂದಿಗೆ ತ್ವರಿತಗತಿಯಲ್ಲಿ ಸಿದ್ದತೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿರುವ ಎಂ.ಜಿ.ಎಸ್.ವಿ.ಮೈದಾನಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಬೃಹತ್ ವೇದಿಕೆ ಸಿದ್ದತೆಗಳನ್ನು ಪರಿಶೀಲಿಸಿದರು.ವಿಶಾಲವಾದ ಜರ್ಮನ್ ಟೆಂಟ್,ಸಭಿಕರ ಆಸನಗಳ ವ್ಯವಸ್ಥೆಗಾಗಿ ನಿರ್ವಹಿಸಲಾಗುತ್ತಿರುವ ಕೆಲಸಗಳನ್ನು ವೀಕ್ಷಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳದ ಬಳಿ ಸಭಿಕರು,ಸಾರ್ವಜನಿಕರಿಗೆ ಆಹಾರ ವಿತರಿಸಲು ಸಿದ್ದ ಮಾಡಲಾಗುತ್ತಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.ಗಣ್ಯರ ವಾಹನಗಳ ನಿಲುಗಡೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ, ಸಂಚಾರ ನಿಯಂತ್ರಣಕ್ಕೆ ಮಾಡುತ್ತಿರುವ ವ್ಯವಸ್ಥೆಗಳನ್ನು ವೀಕ್ಷಿಸಿದರು.
ತುರ್ತಾಗಿ ಎಲ್ಲ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಬೇಕು.ಯಾವುದೇ ಲೋಪಗಳಿಗೆ ಅವಕಾಶವಾದಂತೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಪೂರಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಶೆಟ್ಟಿ ಅವರು ನಿರ್ದೆಶನ ನೀಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳು .ವಿವಿಧ ಇಲಾಖಾ ಸಚಿವರು ಕಾರ್ಯಕ್ರಮಕ್ಕೆ ಬರಲಿದ್ದು ಭರದಿಂದ ಎಲ್ಲ ಸಿದ್ದತೆ ನಡೆಯುತ್ತಿದೆ.ನಾಳೆ ವೇಳೆಗೆ ಷಾಮಿಯಾನ ವೇದಿಕೆ ಇನ್ನಿತರ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಾಗಿ ಕೆಲಸ ನಿರ್ವಹಣೆಗಾಗಿ ನಿಯೋಜಿತರಾಗಿರುವವರು ಹೇಳಿದ್ದಾರೆ ಎಂದರು.
ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಸಹ ಮಾಡಲಾಗುತ್ತಿದೆ.ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು ಸಕಲ ವ್ಯವಸ್ಥೆ ಗೆ ಕ್ರಮ ವಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಮಾಜಿ ಶಾಸಕರಾದ ಎಂ.ನರೇಂದ್ರ, ಚಾಮುಲ್ ಅಧ್ಯಕ್ಷರಾದ ನಂಜುಂಡಸ್ವಾಮಿ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾರೋತ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್, ಡಿ.ವೈ.ಎಸ್.ಪಿ.ಮೋಹನ್ ತಹಶಿಲ್ದಾರ್ ಬಸವರಾಜು,ವಿವಿಧ ಇಲಾಖೆಗಳ ಅಧಿಕಾರಿಗಳು,ಮುಖಂಡರು ಇದ್ದರು.
