ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ವತಿಯಿಂದ ಶಿಕ್ಷಕರ ಮತ್ತು ಇಂಜಿನಿಯರ್ ದಿನಾಚರಣೆ


  • ಶಿಕ್ಷಕರು ಕನಸನ್ನು ಹುಟ್ಟಿಸುತ್ತಾರೆ; ಇಂಜಿನಿಯರ್‌ಗಳು ಆ ಕನಸಿಗೆ ರೂಪ ಕೊಡುತ್ತಾರೆ- ಎಂದು ಪ್ರಾಂಶುಪಾಲ ರವಿ ಕೆ ಅಭಿಪ್ರಾಯ.

ಮೈಸೂರು: ಇತ್ತೀಚೆಗೆ ಹೆಬ್ಬಾಳ್ ರಿಂಗ್ ರೋಡ್ ರಸ್ತೆಯ ಕಲ್ಯಾಣಿ ಹೋಟೆಲ್ ನಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ವತಿಯಿಂದ ಶಿಕ್ಷಕರ ಮತ್ತು ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಧಾಕೃಷ್ಣನ್–ವಿಶ್ವೇಶ್ವರಯ್ಯನವರ ಜೀವನದಿಂದ ಹೊಸ ಪೀಳಿಗೆಗೆ ಸಂದೇಶ ಸಾರುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಈ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಗೋವಿಂದ ರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಹಾಗೂ ಶಿಕ್ಷಣ ತಜ್ಞ ಶ್ರೀ ರವಿ ಕೆ. ಮಾತನಾಡಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನವನ್ನು ನೆನಪಿಸಿಕೊಂಡ ಅವರು, “ಶಿಕ್ಷಕರು ಕನಸನ್ನು ಹುಟ್ಟಿಸುತ್ತಾರೆ; ಇಂಜಿನಿಯರ್‌ಗಳು ಆ ಕನಸಿಗೆ ರೂಪ ಕೊಡುತ್ತಾರೆ” ಎಂದು ಎರಡು ವೃತ್ತಿಗಳ ನಡುವಿನ ಬಂಧದ ಮಹತ್ವವನ್ನು ವಿವರಿಸಿದರು. ಪ್ರಾಂಶುಪಾಲರಾಗಿದ್ದ ಅನುಭವದಿಂದಲೇ ಶಿಕ್ಷಣದ ಕುರಿತು ಮಾತನಾಡಿ, ಕಲಿಕೆ ಪದವಿಯಲ್ಲಿ ಮುಗಿಯುವುದಿಲ್ಲ ಎಂದು ಹೇಳಿದರು. ವಿಶೇಷವಾಗಿ ನವ ಮಾಧ್ಯಮದ ಬಗ್ಗೆ ಮಾತನಾಡಿ, ಸಮಸ್ಯೆ ದೊಡ್ಡದು ಎನ್ನುವ ಬದಲು ಪರಿಹಾರ ಹುಡುಕುವ ಮನೋಭಾವವೇ ನಮ್ಮದಾಗಬೇಕು ಎಂದು ಕಿವಿಮಾತು ಹೇಳಿದರು. ಮುಂದುವರಿದು ಮಾತನಾಡುತ್ತಾ
ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಶಿಕ್ಷಕರ ಪಾತ್ರ ಕಡಿಮೆಯಾಗುವುದಿಲ್ಲ, ಹೆಚ್ಚುತ್ತಿದೆ ಎಂದು ಒತ್ತಿ ಹೇಳಿದ ಅವರು, ಎ ಐ ಮಾಹಿತಿ ನೀಡಬಹುದು, ಶಿಕ್ಷಕರು ಜ್ಞಾನ ಕೊಡುತ್ತಾರೆ” ಎಂದರು. ವಿದ್ಯಾರ್ಥಿಗಳಿಗೆ ಉತ್ತರಗಳ ಜೊತೆಗೆ ಪ್ರಶ್ನೆ ಕೇಳುವುದನ್ನು ಕಲಿಸಬೇಕೆಂದು ಶಿಕ್ಷಕರಿಗೆ, ತಾವು ನಿರ್ಮಿಸುವುದು ಯಾವ ಜೀವನವನ್ನು ಉತ್ತಮಗೊಳಿಸುತ್ತದೆ ಎಂದು ಯೋಚಿಸಬೇಕೆಂದು ಇಂಜಿನಿಯರ್‌ಗಳಿಗೆ ಕಿವಿಮಾತು ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಬರುವ ಮಾಹಿತಿಯನ್ನು “ಕೇಳಿ, ಪರಿಶೀಲಿಸಿ, ಆಮೇಲೆ ನಂಬಿ” ಎಂದು ಯುವಕರಿಗೆ ಸಲಹೆ ನೀಡಿದರು.

ಪೀಳಿಗೆಗಳ ನಡುವೆ ಸ್ಪರ್ಧೆಯ ಬದಲಿಗೆ ಸಂವಾದ ಬೇಕು ಎಂದ ಅವರು “ಯುವಕರ ವೇಗ ಮತ್ತು ಹಿರಿಯರ ವಿವೇಕ ಸೇರಿದಾಗ ಪ್ರಗತಿ ಸಾಧ್ಯ” ಎಂದರು. “2047ರ ಭಾರತ ದೂರದ ಭವಿಷ್ಯವಲ್ಲ; ಅದು ಇಂದಿನ ತರಗತಿ, ಪ್ರಯೋಗಾಲಯ ಮತ್ತು ನಮ್ಮ ನಿರ್ಧಾರಗಳಲ್ಲಿ ರೂಪುಗೊಳ್ಳುತ್ತಿದೆ” ಎಂದು ಹೇಳಿ, ಒಬ್ಬ ಶಿಕ್ಷಕ ಒಬ್ಬ ವಿದ್ಯಾರ್ಥಿಯ ಜೀವನ ಬದಲಿಸುವ, ಒಬ್ಬ ಇಂಜಿನಿಯರ್ ಒಂದು ನೈಜ ಸಮಸ್ಯೆ ಪರಿಹಾರ ಮಾಡುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನ ಲಯನ್ ಜಯಕುಮಾರ್ ಡಿಸ್ಟ್ರಿಕ್ಟ್ ಪಿಎಸ್‌ಟಿ ಫೋರಮ್ ಛೇರ್ ಪರ್ಸನ್ ಉದ್ಘಾಟಿಸಿ ಮಾತನಾಡುತ್ತಾ ಈ ಇಬ್ಬರು ಮಹನೀಯರ ನ್ನು ಒಳಗೊಂಡಂತೆ ನಮ್ಮ ಲಯನ್ ಕ್ಲಬ್ ಅಫ್ ಮೈಸೂರು ಪ್ಯಾಲೇಸ್ ಸಿಟಿ ವತಿಯಿಂದ ಹಮ್ಮಿಕೊಂಡ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಇಬ್ಬರು ಮಹನೀಯರನ್ನು ನಾವು ಸದಾ ಸ್ಮರಿಸಬೇಕು ಎಂದರು. ಜೊತೆಗೆ ನಮ್ಮ ಯುವಜನತೆಗೆ ಇವರಿಬ್ಬರೂ ಮಾರ್ಗದರ್ಶಕರಾಗಿದ್ದಾರೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಲಯನ್ ಎ ವಿ ಮೃತ್ಯುಂಜಯ ಪ್ರಾಂತೀಯ ಅಧ್ಯಕ್ಷರು ಮತ್ತು ಲಯನ್ ಎ ಎಸ್ ಪ್ರಭಾಕರ್ ಆಗಮಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ನಿವೃತ್ತ ಕಾರ್ಯಪಾಲಕ ಅಭಿಯಂತರರು ಹಾಗೂ ಮಾಜಿ ಅಧ್ಯಕ್ಷರು ಮೈಸೂರು ಪ್ರಾಂತೀಯ ತಾಂತ್ರಿಕ ಮತ್ತು ತಾಂತ್ರಿಕೇತರ ಗೃಹ ನಿರ್ಮಾಣ ಸೊಸೈಟಿಯ ಎಂ ಜಿ ನಾಗೇಶ್ ಮತ್ತು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ವಸಂತ ಮಹಲ್ ನ ಪ್ರಾಂಶುಪಾಲರಾದ ಎಸ್ ಜ್ಞಾನೇಶ್ವರಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ಯಾಲೇಸ್ ಸಿಟಿ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಕೆ ಆರ್ ಮಹಾದೇವಮೂರ್ತಿ ರವರು ವಹಿಸಿದ್ದರು. ಅವರು ಮಾತನಾಡುತ್ತಾ ನಮ್ಮ ಈ ಸಂಸ್ಥೆ ಎಲ್ಲರನ್ನೂ ಒಳಗೊಂಡಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಒಂದೇ ಕಾರ್ಯಕ್ರಮದಲ್ಲಿ ಇಬ್ಬರು ಸಾಧಕರ ಸಾಧನೆಯನ್ನ ನೆನಪಿಸಿಕೊಳ್ಳುವುದರ ಜೊತೆಗೆ ಎರಡು ಕ್ಷೇತ್ರದ ಇಬ್ಬರು ಮಹನೀಯರನ್ನು ಸನ್ಮಾನ ಮಾಡಲಾಗಿದೆ. ಅಲ್ಲದೆ ಇದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಅನೇಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯವನ್ನು ಕೂಡ ನೀಡಲಾಗಿದೆ. ಅನೇಕ ಶಾಲಾ- ಕಾಲೇಜುಗಳಿಗೆ, ಪೀಠೋಪಕರಣ, ಧನ ಸಹಾಯ ಮಾಡಲಾಗಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಪ್ಯಾಲೇಸ್ ಸಿಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸಿ ಎಸ್ ರಾಜೇಂದ್ರ, ಕ್ಲಬ್ ನ ಆಡಳಿತ ಅಧಿಕಾರಿ ಜೆ ಮಹೇಶ್, ಕಾರ್ಯದರ್ಶಿ ನಾಗಲಿಂಗಯ್ಯ, ಖಜಾಂಚಿ ಮಂಗಪ್ಪ. ಮತ್ತು ಹಿರಿಯ ಸದಸ್ಯರಾದ ಎಂ ವಿ ನಂದೀಶ್, ಪಿ ಹೊನ್ನರಾಜು ಮುಂತಾದವರು ಹಾಜರಿದ್ದರು.

ಕುಮಾರಿ ತೃಪ್ತಿ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಹದೇವ ಮೂರ್ತಿ ಕೆ ಆರ್ ರವರು ಎಲ್ಲರನ್ನ ಸ್ವಾಗತಿಸಿದರು. ಇದೇ ವೇದಿಕೆಯಲ್ಲಿ ಚಿಕ್ಕಮಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ ಎಸ್ ಸಿ ನರ್ಸಿಂಗ್ ಓದುತ್ತಿರುವ ಐಶ್ವರ್ಯ ಎಂಬ ವಿದ್ಯಾರ್ಥಿನಿಗೆ ಧನಸಹಾಯ ಮಾಡಲಾಯಿತು. ಹೆಚ್ ಎಸ್ ರಾಜು ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *