- ಹೊಸೂರು ರಮೇಶ್ ಅವರ ನೇತೃತ್ವದಲ್ಲಿ ಅದ್ದೂರಿ ಅಲಂಕಾರ
- ಪಾಂಡಿಚೇರಿ, ತಮಿಳುನಾಡು, ಧರ್ಮಸ್ಥಳ, ತಿರುಪತಿ ಸೇರಿ 5 ಕ್ಷೇತ್ರಗಳಲ್ಲಿ ಪ್ರತಿ ವರ್ಷ ವಿಶೇಷ ದಿನಗಳಲ್ಲಿ ಪುಷ್ಪ ಸೇವೆ
ಹನೂರು: ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವು ವಿವಿಧ ಬಗೆಯ ಪುಷ್ಪಗಳಿಂದ ಅದ್ದೂರಿಯಾಗಿ ಕಂಗೊಳಿಸುತ್ತಿದೆ. ಈ ಅದ್ಭುತ ಅಲಂಕಾರದ ಹಿಂದೆ ಇರುವುದು ತಮಿಳುನಾಡಿನ ಹೊಸೂರು ಮೂಲದ ಭಕ್ತ ರಮೇಶ್ ಅವರ ಅಚಲ ನಂಬಿಕೆ.
ಪ್ರತಿ ವರ್ಷದಂತೆ ಈ ಬಾರಿಯೂ ಸುಮಾರು 15 ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿ ರಮೇಶ್ ಅವರು ಉಚಿತವಾಗಿ ದೇವಾಲಯದ ಅಲಂಕಾರ ಮಾಡಿಸಿದ್ದಾರೆ. ಗರ್ಭಗುಡಿ, ರಾಜಗೋಪುರ, ದೇವಾಲಯದ ಹೊರಾಂಗಣ, ರುದ್ರಾಕ್ಷಿ ಮಂಟಪ, ಮಲೆ ಮಹದೇಶ್ವರ, ಬಸವ ವಾಹನ ಹಾಗೂ ರಥೋತ್ಸವ ಮಾರ್ಗವನ್ನು 20 ಬಗೆಯ ವಿವಿಧ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ.
ಅಲಂಕಾರದಲ್ಲಿ ಲಿಲಿಯಂ, ಆರ್ಕಿಡ್, ಕಾರ್ನೇಷನ್, ಜರ್ಬೆರಾ, ಡೈಸಿ ಸೇರಿದಂತೆ 5 ಬಗೆಯ ಹೂವುಗಳು ಮತ್ತು 5 ಕಲರ್ ಗುಲಾಬಿ ಸೇರಿದಂತೆ ಒಟ್ಟು 20 ಬಗೆಯ ತಾಜಾ ಹೂವುಗಳನ್ನು ಕೇರಳ ಮತ್ತು ಬೆಂಗಳೂರಿನಿಂದ ತರಿಸಿ ಬಳಸಲಾಗಿದೆ.
ರಮೇಶ್ ಅವರ ಸೇವೆ ಮಲೆ ಮಹದೇಶ್ವರ ಬೆಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಕಳೆದ 10 ವರ್ಷಗಳಿಂದ ಅವರು ತಮಿಳುನಾಡು, ಪಾಂಡಿಚೇರಿ, ಕರ್ನಾಟಕದ ಹಾಗೂ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲೂ ಪ್ರತಿ ವರ್ಷದ ವಿಶೇಷ ದಿನಗಳು ಮತ್ತು ಉತ್ಸವಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸುತ್ತಿದ್ದಾರೆ.
“ಮಾದಪ್ಪ, ಮಂಜುನಾಥ, ವೆಂಕಟೇಶ್ವರ ಎಲ್ಲರೂ ಒಂದೇ. ಅವರ ಅನುಗ್ರಹದಿಂದ ನಮಗೆ ಎಲ್ಲವೂ ಸಿಕ್ಕಿದೆ. ಅದಕ್ಕೆ ಕೃತಜ್ಞತೆಯಾಗಿ ಈ ಸೇವೆ” ಎಂದು ಭಾವುಕರಾಗಿ ಹೇಳಿದರು.
ಬಣ್ಣ-ಬಣ್ಣದ ಪುಷ್ಪಾಲಂಕಾರವನ್ನು ಕಂಡು ಭಕ್ತರು ಬೆರಗಾದರು. “ಇಂತಹ ಸಿಂಗಾರವನ್ನು ನೋಡಲೇಬೇಕು” ಎಂದು ಭಕ್ತರು ಸಂತಸ ವ್ಯಕ್ತಪಡಿಸಿದರು.
ದರ್ಶನಕ್ಕೆ ಬಂದಿದ್ದ ಭಕ್ತಾದಿಗಳು ಹೂವಿನ ಅಲಂಕಾರವನ್ನು ತಮ್ಮ ಮೊಬೈಲ್‌ಗಳಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
