ವಿದ್ಯುತ್ ಖಾಸಗೀಕರಣ ವಿರೋಧಿಸಿ ಜೂ.22ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

  • ವಿದ್ಯುತ್ ಖಾಸಗೀಕರಣ ಕೈ ಬಿಡುವಂತೆ ಜಿ.ಎಂ.ಸುರೇಶ್ ಆಗ್ರಹ
  • ಜಿಲ್ಲೆಯಿಂದ 500 ವಿದ್ಯುತ್ ಗುತ್ತಿಗೆದಾರರು ಹಾಗೂ ಕಾರ್ಮಿಕರು ಭಾಗವಹಿಸಲಿದ್ದಾರೆ

ಚಾಮರಾಜನಗರ: ರಾಜ್ಯದಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ಟಾಟಾ ಪವರ್ ಕಂಪೆನಿ ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ತಿರಸ್ಕರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಜೂ.  22ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ
ನಡೆಯಲಿದೆ ಎಂದು  ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ  ಜಿ.ಎಂ.ಸುರೇಶ್ ತಿಳಿಸಿದರು.
  ನಗರದ ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಸಂಘದ ರಾಜ್ಯಾಧ್ಯಕ್ಷರಾದ ಸಿ. ರಮೇಶ್ ಅವರ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಜಿಲ್ಲೆಯ ಗುತ್ತಿಗೆದಾರರು, ಗ್ರಾಹಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ವಿದ್ಯುತ್ ಖಾಸಗೀಕರಣದಿಂದ ತೆರಿಗೆ, ಸಾರ್ವಜನಿಕ ಹಣದ ಮೇಲೆ  ಹೊರೆಯಾಗಲಿದ್ದು, ಖಾಸಗಿ ಕಂಪನಿಗಳು ಲಾಭ ಉದ್ದೇಶದಿಂದ ಕೆಲಸ ಮಾಡುತ್ತದೆ. ಇದರಿಂದ ಸಾಮಾನ್ಯ ಜನರಿಗೆ , ಬಡ ವರ್ಗದವರಿಗೆ ವಿದ್ಯುತ್ ದರಭಾರ ಹೆಚ್ಚಾಗಿ ಬೀಳಬಹುದು.ಅಲ್ಲದೆ ಗುತ್ತಿಗೆದಾರರಿಗೆ ತೊಂದರೆಯಾಗಲಿದೆ. ಇದರಿಂದ ಸಾವಿರಾರು ನೌಕರರ ಉದ್ಯೋಗ ಭದ್ರತೆ, ಸರ್ಕಾರಿ ಸೇವೆಯ ಸ್ಥಿರತೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.ಖಾಸಗಿ ಕಂಪನಿಗಳು ನಗರ ಮತ್ತು ಲಾಭದಾಯಕ ಪ್ರದೇಶಗಳಿಗೆ ಮಾತ್ರ ಸೇವೆ ನೀಡುವ ಸಾಧ್ಯತೆ ಇದ್ದು, ಗ್ರಾಮೀಣ, ಹಿಂದುಳಿದ ಪ್ರದೇಶಗಳು ನಿರ್ಲಕ್ಷ್ಯ ಕ್ಕೊಳಗಾಗುವ ಸಾಧ್ಯತೆ ಇದೆ ಆದ್ದರಿಂದ ವಿದ್ಯುತ್ ಖಾಸಗೀಕರಣ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಗ್ರಾಹಕರು, ಸಾರ್ವಜನಿಕರು, ರೈತರು, ವಿದ್ಯುತ್ ಖಾಸಗೀಕರಣ ವಿರೋಧಿಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
  ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಮಾತನಾಡಿ, ವಿದ್ಯುತ್ ಖಾಸಗೀಕರಣದಿಂದ ಗುತ್ತಿಗೆದಾರರು, ಕಾರ್ಮಿಕರು ಬದುಕು ಬೀದಿಗೆ ಬೀಳಲಿದೆ ಗ್ರಾಹಕರ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಸಾರ್ವಜನಿಕರು, ಗುತ್ತಿಗೆದಾರರು, ಕಾರ್ಮಿಕರ ಹಿತದೃಷ್ಟಿಯಿಂದ ವಿದ್ಯುತ್ ವಿತರಣಾ ಕ್ಷೇತ್ರ ಖಾಸಗೀಕರಣವನ್ನು ಸಂಪೂರ್ಣ ಕೈಬಿಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಅನ್ಸರ್ ಆಲಿಖಾನ್ , ಜಿಲ್ಲಾ ಖಜಾಂಚಿ ಎಂ.ಎನ್. ಸಂಪತ್ ಕುಮಾರ್, ಪಿಆರ್ ಓ ಮಹದೇವ ಸೋಮವಾರಪೇಟೆ, ಶಿವಪ್ರಸಾದ್, ಸಿದ್ದಾರ್ಥ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ರಾಜು ಕೆಂಪನಪುರ ಹಾಜರಿದ್ದರು.

Leave a Reply

Your email address will not be published. Required fields are marked *