ಕೊಳ್ಳೇಗಾಲ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ
ಚಾಮರಾಜನಗರ: ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಇಂದು ಭೇಟಿ ನೀಡಿ ಬರ ಪರಿಸ್ಥಿತಿಯ ವೀಕ್ಷಣೆ ಮಾಡಿದರು.
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ದೇಶವಳ್ಳಿ, ಹೆಗ್ಗವಾಡಿಪುರ, ಹೆಗ್ಗವಾಡಿ ಗ್ರಾಮಗಳಿಗೆ ಭೇಟಿ ನೀಡಿ ನೀರಿಲ್ಲದೆ ಒಳಗಿ ಹೋಗಿದ್ದ ಜೋಳ, ಹುರುಳಿ, ಇನ್ನಿತರ ಬೆಳೆಗಳನ್ನು ಪರಿಶೀಲಿಸಿದರು.
ವೀಕ್ಷಣೆ ವೇಳೆ ಬೆಳೆ ವಿಸ್ತೀರ್ಣದ ಬಗ್ಗೆ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಎಷ್ಟು ಎಕರೆಯಲ್ಲಿ ಬಿತ್ತನೆ ಮಾಡಲಾಗಿದೆ. ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂಬ ಬಗ್ಗೆ ನಿಖರ ವಿವರ ಒದಗಿಸುವಂತೆ ಸೂಚಿಸಿದರು. ಬರ ಎದುರಾಗಬಹುದಾದ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಸಚಿವರು ತಿಳಿಸಿದರು.
ಉಮ್ಮತ್ತೂರು ಕೆರೆಗೆ ಸಚಿವರು, ಶಾಸಕರು ಭೇಟಿ ನೀಡಿ ಪರಿಶೀಲಿಸಿದರು. ಸಂತೇಮರಹಳ್ಳಿಯಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಅವರ ನೇತೃತ್ವದಲ್ಲಿ ಸೇರಿದ್ದ ರೈತರೊಂದಿಗೆ ಬೇಡಿಕೆಗಳ ಸಂಬಂಧ ಸಚಿವರಾದ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿದರು.
ಇದಕ್ಕೂ ಮೊದಲು ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬರ ಅಧ್ಯಯನ ಆರಂಭಿಸಿದ ಸಚಿವರು ಯರಗನಹಳ್ಳಿ, ಬೊಮ್ಮನಹಳ್ಳಿ, ಮಾದಲವಾಡಿ, ಶಿಂಡಯ್ಯನಪುರ, ಹೆಗ್ಗೋಠಾರ, ಬೇಡರಪುರ, ಮರಿಯಾಲ ಗ್ರಾಮಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.
ಮಳೆಯಿಲ್ಲದೆ ಒಳಗುತ್ತಿರುವ ಜೋಳ, ಸೂರ್ಯಕಾಂತಿ, ಕಬ್ಬು ಬೆಳೆಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ರೈತರಿಂದ ಅಹವಾಲುಗಳನ್ನು ಆಲಿಸಿದರು. ಬೆಳೆ ಹಾನಿ ಬಗ್ಗೆ ಪ್ರಾಥಮಿಕ ವಿವರ ಪಡೆದ ಸಚಿವರು ಬೆಳೆ ನಷ್ಟದ ಕುರಿತ ಸಮರ್ಪಕ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾದಲವಾಡಿಯಲ್ಲಿ ಗ್ರಾಮಸ್ಥರು ರಸ್ತೆ, ಮನೆಗಳಿಗೆ ನೀರು ನುಗ್ಗದಂತೆ ಚರಂಡಿ, ಶಿಥಿಲವಾಗಿರುವ ಅಂಗನವಾಡಿ ಕಟ್ಟಡವನ್ನು ದುರಸ್ತಿ ಅಥವಾ ಹೊಸದಾಗಿ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಹೆಗ್ಗೋಠಾರದಲ್ಲಿ ಕುಡಿಯುವ ನೀರು, ಮೇವು ಸಮಸ್ಯೆಯನ್ನು ಸ್ಥಳೀಯರು ಸಚಿವರ ಗಮನಕ್ಕೆ ತಂದು ಪರಿಹರಿಸಿಕೊಡುವಂತೆ ಕೋರಿದರು. ಜಾನುವಾರುಗಳಿಗೂ ಕುಡಿಯುವ ನೀರಿಗೆ ತೊಂದರೆಯಾಗಿದೆ. ಹೀಗಾಗಿ ನೀರು ಶೇಖರಣೆಗೆ ತುರ್ತಾಗಿ ವ್ಯವಸ್ಥೆಯಾಗಬೇಕು. ಗ್ರಾಮಕ್ಕೆ ಪಶು ಆಸ್ಪತ್ರೆ ಮಂಜೂರು ಮಾಡಿಕೊಡುವಂತೆ ಕೇಳಿಕೊಂಡರು. ಇದೇ ವೇಳೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸಚಿವರು ಭೇಟಿ ನೀಡಿದರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾಧಿಕಾರಿ ಶ್ರೀ ರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ತಹಶೀಲ್ದಾರ್ ಬಿ. ಗಿರಿಜಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾದ ಸೋಮೇಶ್ವರ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.