ಉತ್ತಮ ಆರೋಗ್ಯಕ್ಕಾಗಿ ಜಂತುಹುಳು ನಿವಾರಣಾ ಮಾತ್ರೆ ಸೇವಿಸಿ : ಸಚಿವ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ಮಕ್ಕಳು ಹಾಗೂ ವಯಸ್ಕರಲ್ಲಿ ರಕ್ತಹೀನತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಜಂತುಹುಳು ನಿವಾರಣಾ ಮಾತ್ರೆ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಂಪುಟ ದರ್ಜೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಕ್ತಹೀನತೆ, ಪೋಲಿಯೊ ರೋಗಗಳು ಇಂದು ನಿನ್ನೆಯದಲ್ಲ. ಆಗಿನ ಹಳೇ ಕಾಲದಲ್ಲಿ ಈ ಕಾಯಿಲೆಗಳಿಗೆ ಔಷಧಿಯೇ ಇರಲಿಲ್ಲ. ಹೊಸ ಹೊಸ ಸಂಶೋಧನೆಗಳಿಂದ ಈ ರೋಗಗಳಿಗೆ ಔಷಧಿ ಕಂಡುಹಿಡಿಯಲಾಗಿದೆ. ಜಂತುಹುಳು ದೇಹದಲ್ಲಿ ಸೇರಿ ರಕ್ತಹೀನತೆಯಿಂದ ಬಳಲುವುದಲ್ಲದೆ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗಲಿದೆ. ಮಕ್ಕಳಲ್ಲಿ ರಕ್ತಹೀನತೆ ತಡೆಯಲು ಜಂತುಹುಳು ನಿವಾರಣಾ ಮಾತ್ರೆ ನೆರವಾಗಲಿದೆ. ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲರೂ ಮಾತ್ರೆ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತಯೆ ಸಲಹೆ ಮಾಡಿದರು. 

ಆಗಸ್ಟ್ 10ರಿಂದ 17ರವರೆಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಝೋಲ್-400 ಎಂ.ಜಿ ಮಾತ್ರೆಗಳನ್ನು ಉಚಿತವಾಗಿ ನೀಡಿ ಮಕ್ಕಳನ್ನು ಜಂತುಹುಳು ಮುಕ್ತರನ್ನಾಗಿಸಲಾಗುತ್ತಿದೆ. ಸರ್ಕಾರವು ಜಂತುಹುಳು ರೋಗ ನಿವಾರಣೆಗೆ ಆರೋಗ್ಯ ಇಲಾಖೆ ಮೂಲಕ ಕಾರ್ಯಕ್ರಮ ಆಯೋಜಿಸುತ್ತಿದೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಹಾರೈಸಿದರು. 

ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಹೆಣ್ಣುಮಕ್ಕಳಲ್ಲಿನ ರಕ್ತಹೀನತೆ ತಡೆಗಟ್ಟಲು ಜಂತುಹುಳು ನಿವಾರಣಾ ಮಾತ್ರೆ ಸೇವನೆ ಅಗತ್ಯವಾಗಿದೆ. ಜಿಲ್ಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಜಂತುಹುಳು ನಿವಾರಣಾ ಮಾತ್ರೆಯಿಂದ ಯಾವುದೇ ಮಗು ವಂಚಿತವಾಗದಂತೆ ಆರೋಗ್ಯ ಇಲಾಖೆ ನೋಡಿಕೊಳ್ಳಬೇಕಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಈ ಮಹತ್ವದ ಕಾರ್ಯಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿರುವುದು ಎಲ್ಲರಿಗೂ ಅಗತ್ಯವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬರು ಅದರಲ್ಲೂ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಸುತ್ತಮುತ್ತಲಿನ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‍ಕುಮಾರ್ ಅವರು ಬರಿಗಾಲಿನಲ್ಲಿ ನಡೆಯುವವರ ದೇಹ ಸೇರುವ ಜಂತುಹುಳು ಆಗಾಗ್ಗೆ 2 ಮಿಲಿ ರಕ್ತ ಹೀರುವ ಮೂಲಕ ದೇಹದಲ್ಲಿ ರಕ್ತಹೀನತೆ ಉಂಟುಮಾಡಲಿದೆ. ಜಂತುಹುಳು ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ವರ್ಷಕ್ಕೆ 2 ಬಾರಿ ಫೆಬ್ರವರಿ ಹಾಗೂ ಆಗಸ್ಟ್ ಮಾಹೆಯಲ್ಲಿ ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ಜಂತುಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

ಅನಿಮೀಯ ಮುಕ್ತ ಜಿಲ್ಲೆಗಾಗಿ ಇಂದಿನಿಂದ 17ರವರೆಗೆ ಅಭಿಯಾನ ಆರಂಭಿಸಲಾಗಿದ್ದು, ಆಗಸ್ಟ್ 17ರ ಮಾಪ್-ಅಪ್ ದಿನದಂದು ಬಿಟ್ಟುಹೋದ ಮಕ್ಕಳಿಗೆ ಮಾತ್ರೆಗಳನ್ನು ನೀಡಲಾಗುವುದು. ಈ ಬಾರಿ ಚಾಮರಾಜನಗರ ತಾಲ್ಲೂಕಿನಲ್ಲಿ 68,556 ಮಕ್ಕಳಿಗೆ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 40,485, ಕೊಳ್ಳೇಗಾಲ ತಾಲ್ಲೂಕಿನಲ್ಲಿ 31,849, ಹನೂರು ತಾಲ್ಲೂಕಿನಲ್ಲಿ 34,428 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 14,819 ಮಕ್ಕಳು ಸೇರಿದಂತೆ ಜಿಲ್ಲಾದ್ಯಂತ ಒಟ್ಟು 1,90,137 ಮಕ್ಕಳಿಗೆ ಜಂತು ನಿವಾರಣಾ ಮಾತ್ರೆಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಡಾ. ರಾಜೇಶ್‍ಕುಮಾರ್ ತಿಳಿಸಿದರು. 

ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ರೇಣುಕಾದೇವಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುಭದ್ರಾದೇವಿ, ಜಿಲ್ಲಾ ನಿರೂಪಣಾಧಿಕಾರಿ ಮಂಜುಳ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶೀಲಾರಾಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾದ ಸೋಮೇಶ್ವರ್, ಮುಖಂಡರಾದ ಬಿ.ಕೆ. ರವಿಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *