ಚಾಮರಾಜನಗರ: ನಗರದ ಹೊರವಲಯದಲ್ಲಿ ಅಂದಾಜು ೪ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಉರ್ದು ಮಾಧ್ಯಮ ಮಹಿಳಾ ಪದವಿಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು.
ನಂತರ ಅವರು ಮಾತನಾಡಿ, ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಅನೂಕೂಲವಾಗುವ ನಿಟ್ಟಿನಲ್ಲಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಾಗುವಂತೆ ನಗರದ ಹೊರವಲಯದಲ್ಲಿ ಅಂದಾಜು ೪ ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಟ್ಟಡ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸಚಿವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ) ನಗರಸಭಾ ನಾಮ ನಿರ್ದೇಶನ ಸದಸ್ಯ ಸ್ವಾಮಿ, ನಗರಸಭೆ ಮಾಜಿ ಉಪಾಧ್ಯಕ್ಷ ರಾಜಪ್ಪ, ಮಾಜಿ ಸದಸ್ಯ ಕಲೀಲ್ ಉಲ್ಲಾ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರೂಪೇಶ್, ಗ್ರಾ,ಪಂ ಮಾಜಿ ಉಪಾಧ್ಯಕ್ಷ ಷಮೀರ್‌ಪಾಷ , ನಯಾಜ್, ಪೃಥ್ವಿ, ಜಿ.ಡಿ. ಪ್ರಕಾಶ್, ಆಯೂಬ್ ಖಾನ್, ರವಿಗೌಡ, ಮಹೇಶ್, ರಮೇಶ್ ಹಾಗೂ ಮುಸ್ಲಿಂ ಧರ್ಮಗುರುಗಳು ಸೇರಿದಂತೆ ಇತರರು ಹಾಜರಿದ್ದರು.
