ಮೇಕೆದಾಟು, ಕೃಷ್ಣಾ, ಕಳಸಾ-ಬಂಡೂರಿ, ಭದ್ರಾ ಮೇಲ್ದಂಡೆಗೆ ಕೇಂದ್ರದ ಮೇಲೆ ಸಚಿವ ಚಲುವರಾಯಸ್ವಾಮಿ ಒತ್ತಡ

  • ದೆಹಲಿಯಲ್ಲಿ ಕರ್ನಾಟಕದ ನೀರಿನ ಹೋರಾಟ
  • ಮೇಕೆದಾಟು DPR ಗೆ ತಕ್ಷಣ ಅನುಮೋದನೆ ಕೊಡಿ, ಕೃಷ್ಣಾ ನ್ಯಾಯಾಧಿಕರಣ ತೀರ್ಪು ಗೆಜೆಟ್ ಮಾಡಿ – ರಾಷ್ಟ್ರೀಯ ಜಲ ಸಮಾವೇಶದಲ್ಲಿ ಸಚಿವರ ಪ್ರಬಲ ವಾದ”
  • ಮೇಕೆದಾಟು ಕುಡಿಯುವ ನೀರಿನ ಭದ್ರತೆಗೆ ಅತ್ಯಗತ್ಯ – CWC ಅನುಮೋದನೆಗೆ ಸಚಿವರ ಆಗ್ರಹ”

ನವದೆಹಲಿ: ಕೇಂದ್ರ ಜಲಶಕ್ತಿ ಸಚಿವಾಲಯವು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ರಾಷ್ಟ್ರೀಯ ಜಲ ಇಲಾಖಾ ಸಮಾವೇಶ-2026’ ನಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದ ಕರ್ನಾಟಕ ನಿಯೋಗವು ರಾಜ್ಯದ ಮಹತ್ವದ ನೀರಾವರಿ ಯೋಜನೆಗಳ ಕುರಿತು ಪ್ರಬಲ ವಾದ ಮಂಡಿಸಿತು.

ಸಮಾವೇಶದಲ್ಲಿ ಸಚಿತ್ರ ವಿವರಣೆ ಮೂಲಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು ರಾಜ್ಯದ 4 ಮಹತ್ವದ ಯೋಜನೆಗಳ ಬಗ್ಗೆ ಕೇಂದ್ರದ ಗಮನ ಸೆಳೆದರು.

ಮೇಕೆದಾಟು ಯೋಜನೆ: ಬೆಂಗಳೂರು ಮಹಾನಗರ ಸೇರಿದಂತೆ ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರಿನ ಭದ್ರತೆ ಹಾಗೂ ಬರಗಾಲದ ವರ್ಷಗಳಲ್ಲಿ ನೀರಿನ ನಿರ್ವಹಣೆಗೆ ಮೇಕೆದಾಟು ಸಮತೋಲನ ಜಲಾಶಯ ಅತ್ಯಗತ್ಯ. ಇದರ ಪರಿಷ್ಕೃತ ಡಿಪಿಆರ್‌ಗೆ ಕೇಂದ್ರ ಜಲ ಆಯೋಗ (CWC) ತಕ್ಷಣ ಅನುಮೋದನೆ ನೀಡಬೇಕು ಎಂದು ಬಲವಾಗಿ ಒತ್ತಾಯಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ: ರಾಜ್ಯಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರಿನ ಸದ್ಬಳಕೆಗೆ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2 (KWDT-II) ರ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರ ಶೀಘ್ರ ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಸಚಿವರು ಆಗ್ರಹಿಸಿದರು.

ಕಳಸಾ-ಬಂಡೂರಿ: ಹುಬ್ಬಳ್ಳಿ-ಧಾರವಾಡ ಮಹಾನಗರದ ಕುಡಿಯುವ ನೀರಿಗಾಗಿ ರೂಪಿಸಿರುವ ಮಹದಾಯಿ ಕೊಳ್ಳದ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಬಾಕಿ ಇರುವ ಅರಣ್ಯ ಮತ್ತು ವನ್ಯಜೀವಿ ಅನುಮೋದನೆಗಳನ್ನು (SC-NBWL) ತ್ವರಿತವಾಗಿ ಮಂಜೂರು ಮಾಡುವಂತೆ ಕೋರಿದರು.

ಭದ್ರಾ ಮೇಲ್ದಂಡೆ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ನೆರವು ಸೇರಿದಂತೆ ಪರಿಷ್ಕೃತ ಅಂದಾಜಿಗೆ ಸಾರ್ವಜನಿಕ ಹೂಡಿಕೆ ಮಂಡಳಿ (PIB) ಶಿಫಾರಸು ಪೂರ್ಣಗೊಳಿಸಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಇದಲ್ಲದೆ, ಯೋಜನೆಗಳ ವಿಳಂಬ ತಪ್ಪಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾದರಿ ಸುಧಾರಣೆಗಳಾದ ಯುಕೆಪಿ-3 ಮಾದರಿಯ ‘ಒಪ್ಪಿಗೆ ಪರಿಹಾರ ದರ’, ಲೋಕ ಅದಾಲತ್ ಮೂಲಕ ಭೂಸ್ವಾಧೀನ ವ್ಯಾಜ್ಯ ಇತ್ಯರ್ಥ, ಅಂದಾಜು ಪರಿಶೀಲನಾ ಸಮಿತಿ (ERC) ರಚನೆ, KPPP ಮೂಲಕ ಪಾರದರ್ಶಕ ಇ-ಟೆಂಡರಿಂಗ್ ಮತ್ತು ಪೈಪ್ಡ್ ನೀರಾವರಿ ಅಳವಡಿಕೆಯನ್ನು ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಯಿತು.

“ನೀರಿಗೆ ಯಾವುದೇ ಗಡಿಗಳಿಲ್ಲ, ಜಲ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ರಾಷ್ಟ್ರೀಯ ಹೊಣೆಗಾರಿಕೆ” ಎಂದು ಸಚಿವರು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ನಡೆದ ಪ್ರಥಮ ಅಧಿವೇಶನದಲ್ಲಿ ದೇಶದ ಎಲ್ಲಾ ರಾಜ್ಯಗಳ ಜಲಸಂಪನ್ಮೂಲ ಸಚಿವರು, ಕಾರ್ಯದರ್ಶಿಗಳೊಂದಿಗೆ ಜಲ ಸಂರಕ್ಷಣೆ, ಮಳೆನೀರು ಕೊಯ್ಲು, ಕುಡಿಯುವ ನೀರಿನ ಸುಸ್ಥಿರತೆ ಕುರಿತು ಚರ್ಚಿಸಲಾಯಿತು. ಈ ವೇಳೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿದರು. ಸಚಿವ ಈಶ್ವರ್ ಖಂಡ್ರೆ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *