- ಪ್ರಕೃತಿ ವಿಕೋಪಗಳ ಸಮಯದಲ್ಲಿ ಸಾಮಾನ್ಯ ಸಂಪರ್ಕ ವ್ಯವಸ್ಥೆಗಳು ಸ್ಥಗಿತಗೊಂಡಾಗ ಹ್ಯಾಮ್ ರೇಡಿಯೋ ಪರ್ಯಾಯ ಸಂವಹನ ವ್ಯವಸ್ಥೆ
ಚಾಮರಾಜನಗರ : ಗಡಿಜಿಲ್ಲೆಯಲ್ಲಿ ಚಾಮರಾಜನಗರದಲ್ಲಿ ಮೊಟ್ಟಮೊದಲ ಬಾರಿಗೆ ಎನ್.ಭರತ್ ಅವರು ಹ್ಯಾಮ್ ರೇಡಿಯೋ ಕೇಂದ್ರ ಸ್ಥಾಪಿಸಿದ್ದಾರೆ.
ಹ್ಯಾಮ್ ರೇಡಿಯೋ ಆಪರೇಟರ್ ಆದ ಭರತ್ ಎನ್. ಅವರು ಚಾಮರಾಜನಗರದ ಶಂಕರಪುರ ಬಡಾವಣೆಯ 2 ನೇ ಕ್ರಾಸ್ ಶ್ರೀ ರಾಘವೇಂದ್ರ ಮಠದ ಹಿಂಭಾಗದಲ್ಲಿರುವ ತಮ್ಮ ನಿವಾಸದಲ್ಲಿ ಸ್ಥಾಪಿಸಿದ್ದಾರೆ. ಈ ಕೇಂದ್ರವು ವೈಜ್ಞಾನಿಕ ಸಂವಹನ, ತುರ್ತು ಪರಿಸ್ಥಿತಿಯ ಸಂಪರ್ಕ ವ್ಯವಸ್ಥೆ ಹಾಗೂ ಯುವಜನರಲ್ಲಿ ತಾಂತ್ರಿಕ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಭರತ್ ಎನ್. ಅವರು ಪ್ರಸ್ತುತ ಸುತ್ತೂರಿನ ಜೆ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ಸಂಪನ್ಮೂಲ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೂಲತಃ ಚಾಮರಾಜನಗರ ಜಿಲ್ಲೆಯವರಾಗಿದ್ದಾರೆ.
ಹ್ಯಾಮ್ ರೇಡಿಯೋ ಅಥವಾ ಅಮೆಚೂರ್ ರೇಡಿಯೋ ಎನ್ನುವುದು ಸರ್ಕಾರದಿಂದ ಪರವಾನಗಿ ಪಡೆದ ವ್ಯಕ್ತಿಗಳು ವೈರ್‌ಲೆಸ್ ಸಂವಹನ ನಡೆಸುವ ವೈಜ್ಞಾನಿಕ ಮತ್ತು ತಾಂತ್ರಿಕ ಹವ್ಯಾಸವಾಗಿದೆ. ಮೊಬೈಲ್ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಸೇವೆಗಳು ಲಭ್ಯವಿಲ್ಲದ ಸಂದರ್ಭದಲ್ಲಿಯೂ ಹ್ಯಾಮ್ ರೇಡಿಯೋ ಮೂಲಕ ವಿದೇಶಗಳ ಆಪರೇಟರ್‌ಗಳೊಂದಿಗೆ ಸಂಪರ್ಕ ಸಾಧಿಸಬಹುದು.
ಪ್ರವಾಹ, ಭೂಕಂಪ, ಚಂಡಮಾರುತ ಹಾಗೂ ಇತರ ಪ್ರಕೃತಿ ವಿಕೋಪಗಳ ಸಮಯದಲ್ಲಿ ಸಾಮಾನ್ಯ ಸಂಪರ್ಕ ವ್ಯವಸ್ಥೆಗಳು ಸ್ಥಗಿತಗೊಂಡಾಗ ಹ್ಯಾಮ್ ರೇಡಿಯೋ ಪರ್ಯಾಯ ಸಂವಹನ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ ವಿಪತ್ತು ನಿರ್ವಹಣೆ ಮತ್ತು ತುರ್ತು ಸಂಪರ್ಕ ವ್ಯವಸ್ಥೆಯಲ್ಲಿ ಹ್ಯಾಮ್ ರೇಡಿಯೋ ಸೇವೆಗೆ ವಿಶೇಷ ಮಹತ್ವವಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಹ್ಯಾಮ್ ರೇಡಿಯೋ ಕೇಂದ್ರ ಸ್ಥಾಪನೆಯಾಗಿರುವುದು ಜಿಲ್ಲೆಯ ಯುವಜನರಲ್ಲಿ ವಿಜ್ಞಾನ ಮತ್ತು ಸಂವಹನ ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸಲು ಪ್ರೇರಣೆಯಾಗಲಿದೆ ಎಂದು ಎನ್. ಭರತ್ ತಿಳಿಸಿದ್ದಾರೆ.