ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜನಕ : ಶ್ರೀನಿಧಿಕುದರ್

ಚಾಮರಾಜನಗರ : ನಾಲ್ವಡಿ ಕೃಷ್ಣರಾಜ ಒಡೆಯರ್  ಭಾರತದ ಮೀಸಲಾತಿಯ ಜನಕರಾಗಿದ್ದರು. ಅವರು ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜಾತಿ ಆಧಾರಿತ ಮೀಸಲಾತಿಯನ್ನು ಮೈಸೂರು ರಾಜ್ಯದಲ್ಲಿ ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಉದ್ಯಮಿ ಶ್ರೀನಿಧಿಕುದರ್ ಹೇಳಿದರು.
ನಗರದ  ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಶ್ರೀಗಂಧ ಕನ್ನಡ ಯುವ ವೇದಿಕೆ ಗಡಿನಾಡು ಕನ್ನಡ ಹೋರಾಟ ವೇದಿಕೆ ವತಿಯಿಂದ ನಡೆದ ಮೈಸೂರು ಸಂಸ್ಥಾನದ ಮಹಾರಾಜರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ಸಂಸ್ಥಾನದ ಒಡೆಯರ ರಾಜ ಸಂತತಿಯ 24ನೇ ರಾಜರಾದ ಅವರು 1902 ರಿಂದ 1940ರ ವರೆಗೆ ತಮ್ಮ ರಾಜ್ಯಭಾರ ನಡೆಸಿ ಓರ್ವ ಸಮರ್ಥ ಆಡಳಿತಗಾರರಾಗಿ, ದೂರದೃಷ್ಠಿಯ ಆಡಳಿತಗಾರರಾಗಿ ನಮಗೆ ದೊರೆತಿದ್ದು ನಮ್ಮ ನಾಡಿನ ಸೌಭಾಗ್ಯ. ನಾಡಿನ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರವಾದದ್ದು ಎಂದರು.
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಸುವರ್ಣಯುಗ”ದ ನಿರ್ಮಾಪಕರು. ಶಿಕ್ಷಣ, ಕೈಗಾರಿಕೆ, ನೀರಾವರಿ ಮತ್ತು ಸಾಮಾಜಿಕ ನ್ಯಾಯದಂತಹ ಕ್ಷೇತ್ರಗಳಲ್ಲಿ ಅವರ ಅಪಾರ ಕೊಡುಗೆಗಳು ಇಂದಿಗೂ ಮಾದರಿಯಾಗಿವೆ.ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯ ನೀಡಲು 1918ರಲ್ಲಿ ಸರ್ ಲೆಸ್ಲಿ ಮಿಲ್ಲರ್ ಸಮಿತಿ’ಯನ್ನು ರಚಿಸಿ, ಭಾರತದಲ್ಲೇ ಮೊದಲ ಬಾರಿಗೆ ಸಾಮಾಜಿಕ ಮೀಸಲಾತಿಗೆ ಅಡಿಪಾಯ ಹಾಕಿದರು.
ಏಷ್ಯಾದಲ್ಲೇ ಮೊಟ್ಟಮೊದಲ ಬಾರಿಗೆ 1902
ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆಯನ್ನು ಆರಂಭಿಸಿ, ಕೋಲಾರದ ಚಿನ್ನದ ಗಣಿಗಳಿಗೆ ವಿದ್ಯುತ್ ಪೂರೈಸಿದರು.ಕಾವೇರಿ ನದಿಗೆ ಕನ್ನಂಬಾಡಿಯಲ್ಲಿ ಕೃಷ್ಣರಾಜ ಸಾಗರ  ಅಣೆಕಟ್ಟನ್ನು ನಿರ್ಮಿಸಿ, ಕೃಷಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರು ಎಂದರು.
   ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಮೈಸೂರು ರಾಜಮನೆತನಕ್ಕೂ ಚಾಮರಾಜನಗರಕ್ಕೂ ಅವಿನಾಭಾವ ನಂಟು ಇದೆ. ನಗರದ… ಶ್ರೀಚಾಮರಾಜೇಶ್ವರ ದೇವಸ್ಥಾನ ನಿರ್ಮಾಣಗೊಂಡು ಈ ವರ್ಷಕ್ಕೆ 200 ವರ್ಷ ತುಂಬುತ್ತಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ದೇವಸ್ಥಾನ ಕಟ್ಟಿಸಿದರು ಎಂದರು.
ಮುಮ್ಮಡಿ ಕೃಷ್ಣರಾಜ ಒಡೆಯರ ಮೊಮ್ಮಗ ನಾಲ್ವಡಿ ಕೃಷ್ಣರಾಜ ಒಡೆಯರ್. ಮೈಸೂರು ರಾಜರ ಪೈಕಿಯಲ್ಲಿ ಅತ್ಯಂತ ಪ್ರಖ್ಯಾತಿ ಪಡೆದವರು ಮುಮ್ಮಡಿಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್. ರಣಧೀರ ಕಂಠೀರವ, ಮೈಸೂರಿನಲ್ಲಿ ದಸರಾ ಆರಂಭಿಸಿದ ರಾಜ ಒಡೆಯರ್ ಅವರ ಹೆಸರಿನಲ್ಲಿ ಸರ್ಕಾರಗಳು ಪ್ರಶಸ್ತಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್‌ಋದ್ವೀದಿ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಡಳಿತ, ಶಿಕ್ಷಣ, ಮಹಿಳಾ ಮೀಸಲಾತಿ, ನೀರಾವರಿ, ಬಾಲ್ಯವಿವಾಹ ಪದ್ಧತಿ ನಿಷೇಧದ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದರು.
ಶ್ರೀಗಂಧ ಕನ್ನಡ ಯುವವೇದಿಕೆ ಅಧ್ಯಕ್ಷ ರವಿಚಂದ್ರಪ್ರಸಾದ್ ಪ್ರಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಗಡಿನಾಡು ಕನ್ನಡ ಹೋರಾಟ ವೇದಿಕೆಯ ಅಧ್ಯಕ್ಷ ರಾಚಪ್ಪ, ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ,ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ಪ್ರಾಂಶುಪಾಲ ಸಿ.ರಂಗಸ್ವಾಮಿ ಕುವೆಂಪು ಕನ್ನಡ ಕಲಾವೇದಿಕೆ ಅಧ್ಯಕ್ಷ ಲಿಂಗರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *