ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಆರೋಗ್ಯ ಸೇವೆ ತುರ್ತು ಸಹಾಯಕ್ಕಾಗಿ ಹೊಸ ಯೋಜನೆ

  • ಜಿಲ್ಲಾಧಿಕಾರಿ ಶ್ರೀರೂಪ ನೇತೃತ್ವದಲ್ಲಿ ಅನುಷ್ಠಾನ ಸಂಬಂಧ ಸಭೆ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಹಾಗೂ ತುರ್ತು ಸಹಾಯವನ್ನು ಸುಧಾರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಶ್ರೀರೂಪ ಅವರ ನೇತೃತ್ವದಲ್ಲಿ ಹೊಸ ಯೋಜನೆಯೊಂದನ್ನು ರೂಪಿಸಲಾಗಿದ್ದು, ಈ ಕುರಿತ ಅನುಷ್ಠಾನ ಸಂಬಂಧ ಇಂದು ವಿವರವಾಗಿ ಸಭೆ ನಡೆಸಿ ವಿಸೃತವಾಗಿ ಚರ್ಚಿಸಲಾಗಿದೆ.

   ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಯೋಜನೆಯಡಿ ಈ ತಿಂಗಳಿನಿಂದಲೇ ಪ್ರಾಯೋಗಿಕ ಯೋಜನೆಯಾಗಿ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಸುಮಾರು 27 ಗ್ರಾಮಗಳಿಗೆ ಜೆಎಸ್‍ಎಸ್ ನಸಿರ್ಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ತಂಡಗಳಾಗಿ ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು. 

   ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಮೂಲಭೂತ ಆರೋಗ್ಯ ಸೇವೆ ಮತ್ತು ಸಾರ್ವಜನಿಕ ಆರೋಗ್ಯ ಜಾಗೃತಿ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಆರೋಗ್ಯ ಮತ್ತು ನೈರ್ಮಲ್ಯ, ಮುಟ್ಟಿನ ಸಂದರ್ಭದಲ್ಲಿ ಸ್ವಚ್ಚತೆ, ಮದ್ಯಪಾನ ವ್ಯಸನ ನಿವಾರಣೆ, ಸಾರ್ವಜನಿಕ ಆರೋಗ್ಯ ಕ್ರಮಗಳ ಕುರಿತು ಅರಿವು ಮೂಡಿಸಲಿದ್ದಾರೆ.

   ಈ ಯೋಜನೆಯು ಒಂದು “ವಿನ್-ವಿನ್” ಮಾದರಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, ದೂರದ ಗಿರಿಜನ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆಯನ್ನು ಬಲಪಡಿಸುವುದರ ಜೊತೆಗೆ ನಸಿರ್ಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಗ್ರಾಮೀಣ ಆರೋಗ್ಯ ಸೇವಾ ಅನುಭವವನ್ನು ನೀಡಲಿದೆ.

   ವಿದ್ಯಾರ್ಥಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಮಾರ್ಗದರ್ಶನ ನೀಡಲಿದ್ದು, ಭಾಗವಹಿಸುವ ವಿದ್ಯಾರ್ಥಿಗಳಿಗೆ ಜಿಲ್ಲಾ ಆಡಳಿತದಿಂದ ಪ್ರಮಾಣ ಪತ್ರಗಳನ್ನು ಕೂಡ ನೀಡಲಾಗುತ್ತದೆ.

   ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಸಿಎಸ್.ಆರ್ ಸಂಯೋಜಕರಾದ ರಕ್ಷಿತಾ ನಾಯಕ್, ಜೆಎಸ್‍ಎಸ್ ನಸಿರ್ಂಗ್ ಕಾಲೇಜಿನ ಪ್ರತಿನಿಧಿಗಳು, ಎಸ್‍ವೈವೈಎಂ ಸಂಸ್ಥೆಯ ಪ್ರತಿನಿಧಿಗಳು, ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *