- ಶಾಲಾ ಪ್ರಾರಂಭೋತ್ಸವದಲ್ಲಿ ಗುಲಾಬಿ ಹೂ, ಸಿಹಿ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಡಿಸಿ, ಸಿಇಒ
ಚಾಮರಾಜನಗರ: ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ. ಪರಿಶ್ರಮ ಪಟ್ಟರೆ ಯಶಸ್ಸು ಸಾಧ್ಯವಾಗಲಿದ್ದು, ಉತ್ತಮ ಜೀವನ ರೂಪಿಸಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.
ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಲಾಗಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ವಿತರಿಸಿ ಸ್ವಾಗತಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರಿಶ್ರಮಪಟ್ಟರೆ ವಿದ್ಯಾರ್ಥಿ ಜೀವನ ಯಶಸ್ವಿಯಾಗಲಿದೆ. ನಿಮ್ಮಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು. ಕಲಿಯುವ ಆಸಕ್ತಿ ನಿಮ್ಮಲ್ಲಿ ನಿರಂತರವಾಗಿರಲಿ. ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನಕ್ಕೆ ಆದ್ಯತೆ ಇರಲಿ ಎಂದು ಜಿಲ್ಲಾಧಿಕಾರಿಗಳು ಕಿವಿಮಾತು ಹೇಳಿದರು.
ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆ ಮಾನವೀಯ ಮೌಲ್ಯಗಳನ್ನು ಹೇಳಿಕೊಡಬೇಕು. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಪೋಷಕರ ನಂಬಿಕೆ ವಿಶ್ವಾಸಕ್ಕೆ ವಿದ್ಯಾರ್ಥಿಗಳು ಧಕ್ಕೆ ಬಾರದಂತೆ ಉನ್ನತ ಸಾಧನೆ ಮಾಡಬೇಕು. ಶಿಸ್ತಿನ ಜೀವನ ರೂಪಿಸಿಕೊಂಡು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಪ್ರಸಕ್ತ ಶೈಕ್ಷಣಿಕ ಅವಧಿಯ ಆರಂಭದಲ್ಲಿಯೇ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಬಂದಿದ್ದಾರೆ. ಇದು ಮುಂದಿನ ಯಶಸ್ಸಿಗೆ ಬುನಾದಿಯಾಗಲಿದೆ ಎಂಬ ವಿಶ್ವಾಸ ಕಂಡು ಬರುತ್ತಿದೆ. ಎಸ್.ಎಸ್.ಎಲ್.ಸಿಯ 1 ಮತ್ತು 2ರ ಪರೀಕ್ಷೆಗಳಲ್ಲಿ ಶೇ. 97ರಷ್ಟು ಫಲಿತಾಂಶ ಜಿಲ್ಲೆಗೆ ಬಂದಿದೆ. ಮುಂದಿನ ಫಲಿತಾಂಶ ಶೇ. 100ರಷ್ಟು ಆಗಲಿ ಎಂಬುದು ತಮ್ಮ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಹಾಜರಾಗಬೇಕು. ಓದಿನಲ್ಲಿ ಆಸಕ್ತಿ ತೋರಿ ಶಾಲೆಯ ಫಲಿತಾಂಶವನ್ನು ಸುಧಾರಣೆ ಮಾಡಬೇಕು. ಬೇರೆ ಶಾಲೆಗಳಿಗಿಂತ ನಮ್ಮ ಶಾಲೆ ಅಗ್ರಸ್ಥಾನದಲ್ಲಿ ಇರಬೇಕು ಎಂಬ ಮಹತ್ವಾಕಾಂಕ್ಷೆ ವಿದ್ಯಾರ್ಥಿಗಳಲ್ಲಿ ಇರಬೇಕು. ಶಾಲಾ ಪ್ರಾರಂಭೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರುವುದಾಗಿ ತಿಳಿಸಿದರು.
Like this:
Like Loading...
Related