- ಭೀಮನ ಅಮಾವಾಸ್ಯೆ, ಸೋನಿ ಎಂ.ಕರೀಗೌಡರ ಪುಣ್ಯ ಸ್ಮರಣೆ ಹಿನ್ನೆಲೆ
- ಇನ್ನೂ ಮುಂದೆ 365 ದಿನವೂ ಉಚಿತ ಕುಡಿತ ಬಿಡಿಸುವ ಶಿಬಿರ : ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು ಘೋಷಣೆ

ಮೈಸೂರು : ಭೀಮನ ಅಮಾವಾಸ್ಯೆ ಹಾಗೂ ದಿ.ಸೋನಿ ಎಂ.ಕರೀಗೌಡ ಅವರ 27ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಗರದ ಹೆಬ್ಬಾಳದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಬುಧವಾರ ವಿವಿಧ ಧಾರ್ಮಿಕ ನೆರವೇರಿಸುವುದರೊಂದಿಗೆ ಬೆಳಗ್ಗೆಯಿಂದ ಸಂಜೆಯ ವರೆಗೂ ನಿರಂತರವಾಗಿ ಸಾವಿರಾರು ಜನರಿಗೆ ಅನ್ನದಾನ ಮಾಡಲಾಯಿತು.
ಸಂಸ್ಥೆಯ ಆವರಣದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿತಸಲಾಗಿತ್ತು. ಪುರೋಹಿತರಾದ ಸಾಗರ್ ಶರ್ಮ ಅವರ ನೇತೃತ್ವದಲ್ಲಿ ಶಿವನಿಗೆ ಪೂಜೆ ನೆರವೇರಿಸಲಾಯಿತು. ಶಿವ ಅಷ್ಠೋತ್ತರ ಮಂತ್ರ ಪಠಣೆಯೊಂದಿಗೆ ವ್ಯಸನಿಗಳು ಹಾಗೂ ಅವರ ಕುಟುಂಬವರ್ಗಕ್ಕೆ ಒಳ್ಳೆಯದಾಗಲಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪೂಜೆ ನೆರವೇರಿಸಲಾಯಿತು.

ಪೂಜೆ ಮುಗಿದ ಕೂಡಲೇ ಅನ್ನದಾನ ಕಾರ್ಯಕ್ಕೆ ಸಂಸ್ಥೆಯ ಸಂಸ್ಥಾಪಕ ಎಸ್.ಬಸವರಾಜು ಚಾಲನೆ ನೀಡಿದರು. ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಅನ್ನದಾನ ಕಾರ್ಯ ಸಂಜೆ 8 ಗಂಟೆಯ ವರೆಗೂ ನಿರಂತರವಾಗಿ ನಡೆಯಿತು. ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಸವಾರರು, ಪಾದಚಾರಿಗಳು ಪ್ರಸಾದ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಎಸ್.ಬಸವರಾಜು, ತಮ್ಮ ತಾತ ದಿ.ಸೋನಿ ಎಂ.ಕರೀಗೌಡ ಅವರು ಆದರ್ಶಪ್ರಾಯ ವ್ಯಕ್ತಿತ್ವದವರು. ಅವರ ಹೆಸರನ್ನು ಶಾಶ್ವತವಾಗಿ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಕುಟುಂಬ ಹಾಗೂ ಬಸವಮಾರ್ಗ ಸಂಸ್ಥೆ ಸಮಾಜಮುಖಿ ಕೆಲಸಗಳನ್ನು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ನಮ್ಮ ತಾತ ಅವರು ನಮ್ಮನ್ನು ಆಗಲಿ ಇಂದಿಗೆ 27 ವರ್ಷವಾದರೂ ಅವರ ನೆನಪು ಮಾತ್ರ ನಮ್ಮ ಮತ್ತು ನಮ್ಮ ಕುಟುಂಬದ ಸದಸ್ಯರ ಮನಸ್ಸಲ್ಲಿ ಸದಾ ಹಸಿರಾಗೆ ಉಳಿದಿದೆ ಎಂದರು.
365 ದಿನವೂ ಉಚಿತ ಕುಡಿತ ಬಿಡಿಸುವ ಶಿಬಿರ : ನಮ್ಮ ಸಂಸ್ಥೆಯಿಂದ ಕಳೆದ 6 ವರ್ಷಗಳಲ್ಲಿ 59 ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗಿದೆ. 16 ಸಾವಿರಕ್ಕೂ ಹೆಚ್ಚು ಜನರಿಗೆ ಈ ಸೇವೆ ನೀಡಲಾಗಿದೆ. ಅದರಲ್ಲಿ ಸಾವಿರಾರು ಜನರು ಇಂದು ವ್ಯಸನಮುಕ್ತ ಜೀವನ ನಡೆಸುತ್ತಿದ್ದಾರೆ. ನಮ್ಮ ತಾತ ಅವರ 27ನೇ ವರ್ಷದ ಈ ಪುಣ್ಯ ಸ್ಮರಣೆ ದಿನದ ಅಂಗವಾಗಿ ಸಮಾಜಮುಖಿಯಾದ ಮತ್ತೊಂದು ಹೊಸ ಘೋಷಣೆ ಮಾಡಲಾಗುತ್ತಿದೆ.
ನಮ್ಮ ಸಂಸ್ಥೆಯಿಂದ ಇದುವರೆಗೆ 10 ದಿನಗಳ ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಆಯೋಜಿಸುತ್ತಿದ್ದೆವು. ಅದರ ಮುಂದುವರಿದ ಭಾಗವಾಗಿ ಮುಂದಿನ ದಿನಗಳಲ್ಲಿ ಈ ಉಚಿತ ಶಿಬಿರ ನಿರಂತರವಾಗಿ ನಡೆಯುತ್ತದೆ. ವರ್ಷದ 365 ದಿನವೂ 10 ದಿನಗಳ ಉಚಿತ ಶಿಬಿರ ನಡೆಯಲಿದೆ. ಕುಡಿತಕ್ಕೆ ದಾಸರಾದವರು ಯಾರೇ ಆದರೂ ನಮ್ಮ ಸಂಸ್ಥೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಬಹುದು. ಅವರಿಗೆ 24*7 ನಮ್ಮ ಸಂಸ್ಥೆಯ ಬಾಗಿಲು ಸದಾ ತೆರೆದಿರುತ್ತದೆ. ಅಂತಹ ವ್ಯಸನಿಗಳಿಗೆ 10 ದಿನಗಳ ಕಾಲ ವಸತಿಯುಕ್ತ ಊಟ, ವಸತಿ, ಕೌನ್ಸಲಿಂಗ್, ಯೋಗ, ಧ್ಯಾನ, ತರಗತಿ ಸೇರಿದಂತೆ ವ್ಯಸನಮುಕ್ತ ನಾಗಲು ವೇದಿಕೆ ಕಲ್ಪಿಸಲಾಗುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಮಲು ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ನೆರವಾಗುವ ಮೂಲಕ ಸಮಾಜದಲ್ಲಿ ಆತನೂ ಕೂಡ ಒಳ್ಳೆಯ ಜೀವನ ನಡೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
