ಶೂಟೌಟ್ ಪ್ರಕರಣ : ಎಫ್ಐಆರ್ ದಾಖಲು

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ವಲಯದಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಗೆ ಮೂವರು ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳ ವಿರುದ್ಧ ಹನೂರು ಠಾಣೆಗೆ ಮೃತ ಆಂತೋಣಿಸ್ವಾಮಿ ಪತ್ನಿ ಲೂರ್ದಾಮೇರಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

ಹನೂರು ಠಾಣೆಗೆ ತೋಮಿಯಾರ್ ಪಾಳ್ಯದ ಮೃತ ಆಂತೋಣಿಸ್ವಾಮಿ ಪತ್ನಿ ಲೂರ್ದಾಮೇರಿ ದೂರು ಕೊಟ್ಟಿದ್ದು, ರಾತ್ರಿ ಬಂಡೆ ಬಳಿ ಮಲಗಿದ್ದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಆ.14ರಂದು ಕಾಡಿಗೆ ಮೇಯಲು ಬಿಟ್ಟಿದ್ದ ಜಾನುವಾರುಗಳ ಪೈಕಿ ಎರಡು ಹಸುಗಳು ಮನೆಗೆ ವಾಪಸ್ ಬಂದಿರಲಿಲ್ಲ, ಹುಡುಕಿಕೊಂಡು ಬರುವುದಾಗಿ ಪತಿ ಆಂತೋಣಿಸ್ವಾಮಿ, ತಮ್ಮ ಸೆಬಾಸ್ಟಿಯನ್ ಡೇವಿಡ್ ಕುಮಾರ್, ಮೈದುನನಾದ ಜಾನ್ ರೋಸ್ ಪೀಟರ್ ಹಾಗೂ ದೊಡ್ಡಪ್ಪನ ಮಗನಾದ ಮಹಿಮಾದಾಸ್ ಸಂಜೆ ತೆರಳಿದ್ದವರು ಮುಂಜಾನೆ ಆದರೂ ಬರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬೆಳಗ್ಗೆ ಮಹಿಮಾದಾಸ್ ಫೆÇೀನ್ ಮಾಡಿ, ಹಸುಗಳನ್ನು ಹುಡುಕಿದರೂ ಸಿಗದಿದ್ದರಿಂದ ಕಾಡಿನ ಮಧ್ಯೆ ಒಂದು ಬಂಡೆ ಬಳಿ ಮಲಗಿದ್ದೆವು. ಮಧ್ಯರಾತ್ರಿ ತನಗೆ ಎಚ್ಚರವಾಗಿ ನಿದ್ರೆ ಬಂದಿರಲಿಲ್ಲ, ಉಳಿದ ಮೂವರು ಮಲಗಿದ್ದರು. ಅಂದಾಜು ಸುಮಾರು 5 ರ ಸುಮಾರಿಗೆ ಅರಣ್ಯ ಸಿಬ್ಬಂದಿ ಮಲಗಿದ್ದ ಮೂವರ ಮೇಲೂ ಗುಂಡು ಹಾರಿಸಿದ್ದು ಎಲ್ಲರೂ ಸ್ಥಳದಲ್ಲೇ ಮೃತಪಟ್ಟರು, ತಾನು ಅಲ್ಲಿಂದ ಓಡಿ ತಪ್ಪಿಸಿಕೊಂಡೆ ಎಂದು ತಿಳಿಸಿದನು.

ಅದಾದ ಬಳಿಕ, ನಾನು ಸಂಬಂಧಿಕರಿಗೆ ಮೃತಪಟ್ಟ ಮಾಹಿತಿ ತಿಳಿಸಿದ್ದು, ಮಲಗಿದ್ದವರನ್ನು ಕೊಲೆ ಮಾಡಿದ್ದು ಅರಣ್ಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರಿನಲ್ಲಿ ಅರಣ್ಯ ಸಿಬ್ಬಂದಿ ಅಥವಾ ಅರಣ್ಯಾಧಿಕಾರಿಗಳ ಹೆಸರನ್ನು ಉಲ್ಲೇಖಿಸಿಲ್ಲ.

ಅರಣ್ಯ ಇಲಾಖೆ ಪ್ರಕಟಣೆ: ಅರಣ್ಯ ಇಲಾಖೆ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದು ಕಾವೇರಿ ವನ್ಯಜೀವಿ ಧಾಮದ ಹನೂರು ವಲಯದ ಶಾಗ್ಯ ಗಸ್ತಿನ ಹೊಳೆಮುರಿದಟ್ಟಿ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗಾರರು ಬಂದೂಕು ಸಮೇತ ಪ್ರವೇಶಿಸಿರುತ್ತಾರೆ ಎಂಬ ಮಾಹಿತಿ ಲಭಿಸಿತ್ತು. ಅದರ ಮೇರೆಗೆ ಎರಡು ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡ ವೇಳೆ, ಬೆಳಗಿನ ಜಾವ 5 ರಿಂದ 5.30ರ ವೇಳೆಗೆ ಕಲ್ಲುಬಂಡೆಗಳು, ಪೆÇದೆಗಳಲ್ಲಿ ಅವಿತಿದ್ದ ಕಳ್ಳ ಬೇಟೆಗಾರರು ಏಕಾಏಕಿ ನಾಡ ಬಂದೂಕಿನಿಂದ ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪ್ರತಿದಾಳಿ ಮಾಡಿದೆವು. ಕಳ್ಳಬೇಟೆಗಾರರು ನರಳಾಟ ಕೇಳಿ ಹತ್ತಿರ ಹೋಗಿ ಟಾರ್ಚ್ ಹಿಡಿದು ಪರಿಶೀಲಿಸಿದಾಗ ಮೂವರು ನರಳಾಡುತ್ತಿರುವುದು ಓರ್ವ ಓಡುತ್ತಿರುವುದು ಕಂಡು ಬಂದಿತು. ಬಳಿಕ, ಕೂಡಲೇ ಮೂವರನ್ನು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ಕರೆದೊಯ್ದಾಗ ಮೂವರು ಕೂಡ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಆಂತೋಣಿಸ್ವಾಮಿ(50), ಜಾನ್ ರೋಸ್ ಪೀಟರ್(45) ಹಾಗೂ ಕುಮಾರ್(33) ಮೃತಪಟ್ಟಿದ್ದು, ಮಹಿಮಾದಾಸ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಎರಡು ನಾಡಬಂದೂಕು, ಎರಡು ಚೀಲದಲ್ಲಿ ಅಂದಾಜು 20 ಕೆಜಿ ಮಾಂಸ, ಹೆಡ್ ಟಾರ್ಚ್, ಬ್ಯಾಟರಿ, ಮದ್ದಿನ ಪೌಡರ್, ಗುಂಡುಗಳು, ಪಾತ್ರೆ, ಲೋಟ, ಸಾಂಬಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದೇವೆ. ಮನವೊಲಿಕೆ ವಿಫಲವಾಗಿ ಕೈ ಮೀರಿದ ಸನ್ನಿವೇಶದಲ್ಲಿ ಗುಂಡು ಪ್ರತಿದಾಳಿ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಘಟನೆ ಬಗ್ಗೆ ಐಜಿಪಿ ಅವರು ಹೇಳಿದ್ದಿಷ್ಟು : ಘಟನೆ ಸಂಬಂಧ ಕೂಲಂಕಷ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲಾಗುವುದು ಎಂದು ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.

ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೃತ ಆಂತೋಣಿಸ್ವಾಮಿ ಪತ್ನಿ ಲೂರ್ದಾಮೇರಿ ಅರಣ್ಯಾಧಿಕಾರಿಗಳ ವಿರುದ್ಧ ದೂರು ಕೊಟ್ಟು ಮಲಗಿದ್ದವರ ಮೇಲೆ ಗುಂಡು ಹಾರಿಸಲಾಗಿದೆ ಎಂದಿದ್ದಾರೆ. ಅರಣ್ಯ ಇಲಾಖೆಯು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿರುವುದಾಗಿ ತಿಳಿಸಿದೆ. ಎರಡೂ ಆಯಾಮಗಳಲ್ಲಿ ತನಿಖೆ ನಡೆಸಿ ಸಾಕ್ಷ್ಯಾಧಾರಗಳ ಮೂಲಕ ತನಿಖೆ ನಡೆಸಲಿದ್ದು ಸತ್ಯಾಸತ್ಯತೆ ತಿಳಿಯಲಿದೆ ಎಂದಿದ್ದಾರೆ.

ಮೃತಪಟ್ಟವರ ಮೇಲೆ ಈ ಹಿಂದೆ ಕಳ್ಳ ಬೇಟೆ ಪ್ರಕರಣಗಳು ಇದ್ದವಾ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಎರಡು ಚೀಲಗಳಲ್ಲಿ ಮಾಂಸವನ್ನು ವಶಕ್ಕೆ ಪಡೆದಿದ್ದು, ಯಾವ ಮಾಂಸ ಎಂಬುದು ಇನ್ನು ತಿಳಿದಿಲ್ಲ ಎಂದು ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದ್ದಾರೆ.

ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ: ಕಳ್ಳ ಬೇಟೆಗಾರರೆಂದು ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿಯ ಗುಂಡೇಟಿಗೆ ಮೂವರು ಗ್ರಾಮಸ್ಥರು ಬಲಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಪ್ರಕರಣದ ಬಗ್ಗೆ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ. ಇದರಲ್ಲಿ ಮೇಲ್ನೋಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯ ತಪ್ಪು ಕಂಡುಬರುತ್ತಿದೆ. ಸತ್ಯಾಸತ್ಯತೆ ತಿಳಿಯಲು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಗುಂಡೇಟಿಗೆ ಬಲಿಯಾದ ಆಂಥೋನಿಸ್ವಾಮಿ, ಪೀಟರ್ ಹಾಗೂ ಕುಮಾರ್ ಅವರ ಪಾರ್ಥಿವ ಶರೀರವನ್ನು ವೀಕ್ಷಣೆ ಮಾಡಿದ ನಂತರ ಮೈಸೂರಿನ ಶವಾಗಾರದ ಬಳಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಘಟನೆ ಕುರಿತು ಅರಣ್ಯ ಇಲಾಖೆಯವರನ್ನು ಕೇಳಿರುವೆ. ಬೆಳಗಿನ ಜಾವ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿಕೊಂಡು ಮಾಂಸ ತೆಗೆದುಕೊಂಡು ಬರುವಾಗ ಅರಣ್ಯ ಇಲಾಖೆಯವರು ಶರಣಾಗುವಂತೆ ಹೇಳಿದರಂತೆ. ಆದರೆ, ಅವರ ಮೇಲೆಯೇ ಶೂಟ್ ಮಾಡುವ ರೀತಿ ಏರಿ ಬಂದರಂತೆ. ಆಗ ಬೇರೆ ದಾರಿ ಇಲ್ಲದೇ ಗುಂಡು ಹಾರಿಸಲಾಯಿತು ಎಂದು ಅರಣ್ಯಾಧಿಕಾರಿಗಳು ನನ್ನ ಬಳಿ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ನೀಡಿದ ಮಾಹಿತಿಯ ಸತ್ಯಾಸತ್ಯತೆ ಅರಿಯಲು ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಘಟನೆಯ ನಂತರವೂ ಅರಣ್ಯ ಇಲಾಖೆಯವರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ಇದೆ. ಈ ಶೂಟ್ ಔಟ್ ಪ್ರಕರಣದಲ್ಲಿ ಅರಣ್ಯ ಇಲಾಖೆಯದ್ದೇ ತಪ್ಪಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದು, ಮತ್ತೊಬ್ಬ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನಿಂದ ಮಾಹಿತಿ ಪಡೆದರೆ ಸತ್ಯಾಂಶ ತಿಳಿಯಲಿದೆ ಎಂದರು.

ಸಂಸದ ಸುನೀಲ್ ಬೋಸ್ ಪ್ರತಿಕ್ರಿಯೆ: ಗುಂಡೇಟಿಗೆ ಬಲಿಯಾದರು ಬೇಟೆಯಾಡಿದ ಮಾಂಸವನ್ನು ಹಂಚಿಕೊಳ್ಳುತ್ತಿದ್ದರಂತೆ. ಆಗ ಅರಣ್ಯ ಸಿಬ್ಬಂದಿ ಅವರನ್ನು ನೋಡಿ ಶರಣಾಗುವಂತೆ ಹೇಳಿದರಂತ. ಆಗ ಬೇಟೆಗಾರರು ಅರಣ್ಯ ಸಿಬ್ಬಂದಿಗಳ ಮೇಲೆ ಫೈರ್ ಮಾಡಲು ಮುಂದಾಗಿದ್ದರಂತೆ, ಹೀಗಾಗಿ ಅರಣ್ಯ ಸಿಬ್ಬಂದಿ ಕೂಡಾ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ ಎಂದು ಅರಣ್ಯಾಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಒಂದು ಭಾಗದ್ದಾಗಿದ್ದು, ಇದನ್ನು ನಂಬಲು ನಾನು ಸಿದ್ಧನಿಲ್ಲ. ಮತ್ತೊಂದು ಭಾಗದ ಮಾಹಿತಿಯನ್ನು ಪಡೆಯಲು ಸ್ಥಳಕ್ಕೆ ಹೋಗುತ್ತೇನೆ. ಶೂಟೌಟ್ ಆದ ಶವವನ್ನು ಮೈಸೂರಿಗೆ ತೆಗೆದುಕೊಂಡು ಬಂದಿದ್ದು ಯಾಕೆ? ಈ ಅನುಮಾನದ ಪ್ರಶ್ನೆಗೆ ಯಾರಿಂದಲೂ ಸಮರ್ಪಕ ಉತ್ತರ ಸಿಗುತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

ಏಕೆ ಶೂಟ್ ಮಾಡುತ್ತೀರಿ?: ಬೇಟೆ ಬಂದಿದ್ದರಿಂದ ಶೂಟ್ ಮಾಡಲಾಗಿದೆ ಅಂತ ಹೇಳುತ್ತಿದ್ದಾರೆ. ಮೃತರು ಬೇಟೆಗಾರರಲ್ಲ. ಶೂಟ್ ಮಾಡಿದ ಬಳಿಕ ಮೃತ ವ್ಯಕ್ತಿಗಳು ಬೇಟೆಗೆ ಬಂದಿದ್ದರು ಅಂತ ಹೇಳುತ್ತಿದ್ದಾರೆ. ಬೇಟೆಗೆ ಬಂದ್ರೆ ಏಕೆ ಶೂಟ್ ಮಾಡುತ್ತೀರಿ ಕಾಲಿಗೆ ಶೂಟ್ ಮಾಡಬಹುದು ಅಂತ ತರಬೇತಿಯಲ್ಲಿ ಸಿಬ್ಬಂದಿಗೆ ಹೇಳಿಕೊಟ್ಟಿರುತ್ತಾರೆ. ಆದರೆ, ಮೃತ ವ್ಯಕ್ತಿಯನ್ನು ಗಮನಿಸಿದಾಗ ಎದೆ, ಪಕ್ಕಡಿ ಹಾಗೂ ಕತ್ತಿಗೆ ಶೂಟ್ ಮಾಡಿರುವುದು ಗೊತ್ತಾಗಿದೆ. ಅಲ್ಲದೇ, ಘಟನೆ ನಡೆದ ಸ್ಥಳದಲ್ಲಿ ಆಸ್ಪತ್ರೆ ಇದ್ದರೂ ಇವರನ್ನು ಮೈಸೂರಿಗೆ ತೆಗೆದುಕೊಂಡು ಬರಲಾಗಿದೆ. ಏಕೆ ಅಂತ ಕೇಳಿದರೆ ಯಾರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಮಗೆ ನ್ಯಾಯ ಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಜೊತೆಗೆ ಮೃತ ವ್ಯಕ್ತಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಮ್ಯಾಜಿಸ್ಟ್ರೇಟ್ ತನಿಖೆ ಬಳಿಕ ವಾಸ್ತವಾಂಶ ತಿಳಿಯಲಿದೆ: ಸಿಎಂ ಡಿಕೆಶಿ
ಚಾಮರಾಜನಗರ ಅರಣ್ಯದಲ್ಲಿ ನಡೆದ ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆ ಬಳಿಕ ವಾಸ್ತವಾಂಶ ತಿಳಿಯಲಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಚಾಮರಾಜನಗರ ಅರಣ್ಯದಲ್ಲಿ ನಡೆದ ಘಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನನಗೆ ಬೆಳ್ಳಗ್ಗೆ ಐದು ಗಂಟೆಗೆ ಮಾಹಿತಿ ತಲುಪಿದೆ. ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದೇವೆ. ತನಿಖೆಯ ವೇಳೆ ವಾಸ್ತವಾಂಶ ತಿಳಿಯುತ್ತದೆ ಎಂದರು.

Leave a Reply

Your email address will not be published. Required fields are marked *