- ಕೆಎಸ್ಅರ್ ಟಿಸಿ ಸಂಸ್ಥಾಪನ ದಿನದ ಅಂಗವಾಗಿ ಇಂಡೋರ್ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ರಾಜರಾಜೇಶ್ವರಿ ನಗರದ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಭಾನುವಾರ 4ನೇ ವರ್ಷದ ರಾಜ್ಯ ಮಟ್ಟದ ಸಾರಿಗೆ ನೌಕರರ ‘ಇಂಡೋರ್ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ – 2026 ಸ್ಪರ್ಧೆ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ದೈನಂದಿನ ಜೀವನದಲ್ಲಿ ಕ್ರೀಡೆ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶರೀರ ಮತ್ತು ಮನಸ್ಸು ಸದೃಢವಾಗುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ತೂಕವನ್ನು ಸಮತೋಲನದಲ್ಲಿಡುತ್ತದೆ ಹಾಗೂ ಮಾನಸಿಕ ಒತ್ತಡ ಹಾಗೂ ಖಿನ್ನತೆಯನ್ನು ಕಡಿಮೆ ಮಾಡಿ ಉತ್ತಮ ನಿದ್ರೆ ಬರಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಜೀವನದಲ್ಲಿಯ ಉದ್ದೇಶ, ಗುರಿ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ ಇದೆ. ಆರೋಗ್ಯ ವೃದ್ಧಿಸಿಕೊಳ್ಳಲು ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಪಾಲ್ಗೋಳ್ಳಬೇಕು. ಕ್ರೀಡೆ ಕೇವಲ ಮನೋರಂಜನೆ ಮಾತ್ರವಲ್ಲ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.
ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಎಸ್. ಬಸವರಾಜು ಮಾತನಾಡಿ, ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರಲು ಸಾಧ್ಯ ಎಂಬ ದಾರ್ಶನಿಕರ ಅನುಭವ ವಾಣಿಯಂತೆ ಮನುಷ್ಯನ ದೇಹ ಮತ್ತು ಮನಸ್ಸುಗಳು ದೃಢತೆ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆ ರೂಢಿಸಿಕೊಳ್ಳುವುದು ಉತ್ತಮ. ಇದರಿಂದ ಪ್ರತಿಯೊಬ್ಬರೂ ಒಳ್ಳೆಯ ಆರೋಗ್ಯ ಹೊಂದಬಹುದು. ನಮ್ಮ ಸಂಸ್ಥೆಯಿಂದ ಇದೇ ಆಗಸ್ಟ್ 9 ರಿಂದ 59 ನೇ ಕುಡಿತ ಬಿಡಿಸುವ ಶಿಬಿರವನ್ನು ಆಯೋಜಿಸಲಾಗಿದೆ. ಕೆಎಸ್ಆರ್ ಟಿಸಿ ನಿಗಮದ ನೌಕರರಲ್ಲಿ ಯಾರಾದರೂ ವ್ಯಸನಕ್ಕೆ ತುತ್ತಾಗಿದ್ದರೆ ಅವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಇದೇ ವೇಳೆ ಸಾರಿಗೆ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ನೌಕರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳಾದ ಶಿವರಾಜೇಗೌಡ, ಶಿವಪ್ರಕಾಶ್, ಎಂ.ರಾಜೇಶ್, ಸತೀಶ್ ಬೋರೇಗೌಡ, ಕಾರ್ಮಿಕ ಮುಖಂಡರಾದ ಮಲ್ಲಯ್ಯ, ರಾಜೇಶ್, ರಕ್ತದಾನಿ ಮಹದೇವಸ್ವಾಮಿ ಇತರರು ಇದ್ದರು.